ಜಿಲ್ಲೆ

ಸರ್ಕಾರಿ ಗೋದಾಮು ಮ್ಯಾನೇಜರ್ ಆತ್ಮಹತ್ಯೆ; ಭ್ರಷ್ಟಾಚಾರದ ತನಿಖೆ ಎದುರಿಸಬೇಕಾದ ಆತಂಕ ; ಡೆತ್‌ನೋಟ್‌ನಲ್ಲಿ ಮೂವರ ಹೆಸರು

Tumakuru

ಪಾವಗಡ : ವರ್ಗಾವಣೆಯಾದ ತಿಂಗಳೊಳಗೆ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರದ ತನಿಖೆ ಎದುರಿಸಬೇಕಾಗಲಿದೆ ಎಂಬ ಕಾರಣಕ್ಕೆ ಮನನೊಂದ ಸರ್ಕಾರಿ ಗೋದಾಮಿನ ಮ್ಯಾನೇಜರ್ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನಿಗೂಢ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮ್ಯಾನೇಜರ್ ಆತ್ಮಹತ್ಯೆ ಸುದ್ದಿತಿಳಿಯುತ್ತಿದ್ದಂತೆ ಜಿಲ್ಲಾಮಟ್ಟ ಅಧಿಕಾರಿಗಳು ಮಂಗಳವಾರ ಪಾವಗಡಕ್ಕೆ ದೌಡಾಯಿಸಿದ್ದು ಸದ್ಯ ಗೋದಾಮಿಗೆ ಬೀಗ ಜಡಿಯಲಾಗಿದೆ.

ಪಟ್ಟಣದ ಜೈನ್ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ರಮೇಶ್ (57) ಸೋಮವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಷ್ಟಗಿ ತಾಲೂಕಿನಿಂದ 23 ದಿನಗಳ ಹಿಂದಷ್ಟೇ ಪಾವಗಡಕ್ಕೆ ವರ್ಗಾವಣೆಯಾಗಿದ್ದ ರಮೇಶ್ ಒಬ್ಬರೇ ಪಟ್ಟಣದಲ್ಲಿ ನೆಲೆಸಿದ್ದರು.

ರಮೇಶ್ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಾಕಳಿಯವರಾಗಿದ್ದು, ಪತ್ನಿ, ಮಕ್ಕಳು ಅಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ಪಟ್ಟಣದ ಗೋದಾಮಿನಲ್ಲಿ ನಡೆದಿದೆ ಎನ್ನಲಾದ 40 ರಿಂದ 50 ಲಕ್ಷ ರೂಪಾಯಿ ಭ್ರಷ್ಟಾಚಾರ ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ರಮೇಶ್ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದು ಆತ್ಮಹತ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಈ ಹಿಂದೆ ಇದ್ದ ಮ್ಯಾನೇಜರ್ ಗೋಪಿ ಅವರಿಂದ ಅಧಿಕಾರ ಸ್ವೀಕರಿಸುವ ವೇಳೆ ಹಳೆಯ ಸ್ಟಾಕ್ ಬುಕ್ ಪರಿಶೀಲಿಸದೆ ರಮೇಶ್ ಸಹಿ ಮಾಡಿಬಿಟ್ಟಿದ್ದರು. ಅವ್ಯವಹಾರ ನಡೆದಿರುವುದು ನಂತರ ಗೊತ್ತಾಗಿದ್ದು ಇದರಿಂದ ಮನನೊಂದು ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ದೂರಿದ್ದಾರೆ.

ಪತಿ ರಮೇಶ್ ಆತ್ಮಹತ್ಯೆ ಸಂಬಂಧಿಸಿದಂತೆ ಪತ್ನಿ ವೈಜಯಂತಿ ಮಾಲಾ ಪಾವಗಡ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಅಪರಾಧ ವಿಭಾಗದ ಎಸ್‌ಐ ಗುರುನಾಥ್ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಂಗಳವಾರ ಸರ್ಕಾರಿ ಅಸ್ಪತ್ರೆಯಲ್ಲಿ ರಮೇಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರು ಅಂಬುಲೆನ್ಸ್ ನಲ್ಲಿ ತಮ್ಮ ಸ್ವಗ್ರಾಮಕ್ಕೆ ಕೊಂಡೊಯ್ಯದಿದ್ದು ಅಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಮೂವರು ಹೆಸರು : ರಮೇಶ್ ಅವರನ್ನು ಬಲವಂತವಾಗಿ ಪಾವಗಡಕ್ಕೆ ವರ್ಗವಣೆ ಮಾಡಲಾಗಿದೆ. ಈ ಹಿಂದೆ ಗೋದಾಮಿನಲ್ಲಿ ಮ್ಯಾನೇಜರ್ ಆಗಿದ್ದ ಗೋಪಿ ಹಾಗೂ ಗೋದಾಮಿನ ಹಮಾಲಿಗಳಾದ ಮಂಜುನಾಥ್, ಹನುಮಂತರಾಯ ನನ್ನ ಪತಿಯ ಸಾವಿಗೆ ಕಾರಣ. ಇದನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಇಲ್ಲಿನ ಅವ್ಯವಹಾರದ ಬಗ್ಗೆ ನೊಂದು ಕೊನೆಗೆ ನಾನು ಜೈಲಿಗೆ ಹೋದರು ಚಿಂತಿಸಬೇಡಿ ಎಂದು ಸಹ ಹೇಳಿದ್ದರು. 32 ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ನನ್ನ ಪತಿ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿದೆ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತ ರಮೇಶ್ ಪತ್ನಿ ವೈಜಯಂತಿಮಾಲಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಪತಿ ರಮೇಶ್ ಸಾವಿಗೆ ಈ ಮೂವರೇ ಕಾರಣ ಎಂದು ದೂರು ಸಹ ಕೊಟ್ಟಿದ್ದಾರೆ.

ಗೋದಾಮಿನ ಗೋಪಿ, ಮಂಜು, ಹನುಮಂತರಾಯ ನಮ್ಮ ತಂದೆಯ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಹಗರಣದ ಹಿಂದೆ ದೊಡ್ಡ ಜಾಲ ಇದ್ದು, ಉನ್ನತ ಮಟ್ಟದ ತನಿಖೆಗೊಳಪಡಿಸಿ ಈ ಜಾಲವನ್ನು ಬೇಧಿಸಿ, ನಮಗೆ ನ್ಯಾಯದೊರಕಿಸಿಕೊಡಬೇಕು. ಮಾನ್ವಿತ್ ಮೃತ ರಮೇಶ್ ಪುತ್ರ