ಜಿಲ್ಲೆ

ಹೆದ್ದಾರಿ ಯೋಜನೆಗೆ ಅಧಿಕಾರಿಗಳದ್ದೇ ಅಸಹಕಾರ

Dakshina Kannada

ವೇಣುವಿನೋದ್ ಕೆ.ಎಸ್. ಮಂಗಳೂರು

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್-ಅಡ್ಡಹೊಳೆ ನಡುವಿನ ಕಾಂಕ್ರೀಟ್ ಚತುಷ್ಪಥ ಕಾಮಗಾರಿಗೆ ಕೆಲವು ವರ್ಷಗಳಿಂದ ಒಂದಿಲ್ಲೊಂದು ಅಡಚಣೆ ಎದುರಾಗುತ್ತಿದೆ. ಪ್ರಸಕ್ತ ಮರು ಟೆಂಡರ್‌ಗೆ ಅಡ್ಡಿಯಾಗಿರುವುದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯ ಹಾಸನ ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಅಸಹಕಾರ.

1600 ಕೋಟಿ ರೂ. ಮೊತ್ತದ ಹೆದ್ದಾರಿ ಕಾಮಗಾರಿಗೆ ಕೆಲತಿಂಗಳ ಹಿಂದೆಯೇ ಮರುಟೆಂಡರ್ ನಡೆಯಬೇಕಿತ್ತು. ಆದರೆ ಈ ಕಚೇರಿಯು ನಿರಂತರ ವಿಳಂಬ ನೀತಿ ಅನುಸರಿಸುತ್ತಿರುವುದು ಸಮಸ್ಯೆಯಾಗಿದೆ. ಕಳೆದ 8 ವರ್ಷಗಳಿಂದ ಹಾಸನದ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಸಹಕಾರ ನೀಡದಿರುವುದೂ ಕಾಮಗಾರಿಯ ವಿಳಂಬಕ್ಕೆ ಕಾರಣಗಳಲ್ಲೊಂದು ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳ ದೂರು.

ಈ ಅಧಿಕಾರಿಗೆ ನ.5ರ ಕೊನೆಯ ವಾಯಿದೆ ನೀಡಲಾಗಿದ್ದು, ಅದರೊಳಗೆ ಭೂಸ್ವಾಧೀನದ ಅವಾರ್ಡ್ (ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ 3ಜಿ ಅನ್ವಯ) ಪ್ರಕಟಿಸುವಂತೆ ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಅಂತಿಮ ಪರಿಹಾರ ಆದೇಶ ಆದ ಕೂಡಲೇ ಟೆಂಡರ್ ಪ್ರಕ್ರಿಯೆ ತ್ವರಿತಗೊಳ್ಳಲಿದ್ದು, ವರ್ಷಾಂತ್ಯದೊಳಗೆ ಕಾಮಗಾರಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

ಯೋಜನೆಯನ್ನು ಹಾಸನ ಎನ್‌ಎಚ್‌ಎಐ ಅಧೀನದಿಂದ ಮಂಗಳೂರಿಗೆ ಈ ವರ್ಷದ ಫೆಬ್ರವರಿಯಲ್ಲಿ ವರ್ಗಾಯಿಸಲಾಗಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ಹಾಸನ ವಿಭಾಗದಿಂದಲೇ ನಡೆಯುತ್ತಿದೆ.

ತಾತ್ವಿಕ ಒಪ್ಪಿಗೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿಯಿಂದ ಎರಡನೇ ಬಾರಿಗೆ ಟೆಂಡರ್‌ಗೆ ಅನುಮೋದನೆ ಕೋರಿ ಕಳುಹಿಸಲಾಗಿದ್ದ ಪ್ರಸ್ತಾವನೆಗೆ ಕೇಂದ್ರ ಭೂಸಾರಿಗೆ ಸಚಿವಾಲಯದಿಂದ ತಾತ್ವಿಕ ಒಪ್ಪಿಗೆ ದೊರೆತಿದೆ.

ಆದರೆ ಭೂಸ್ವಾಧೀನ ಪರಿಹಾರವಾಗದೆ ಟೆಂಡರ್ ಕರೆಯುವಂತಿಲ್ಲ ಎಂಬ ಷರತ್ತು ಇರುವುದರಿಂದ ವಿಳಂಬವಾಗುತ್ತಿದೆ. ಅದಕ್ಕಾಗಿ ಭೂಸ್ವಾಧೀನ ವಿಭಾಗದ ಮೇಲೆ ಸದ್ಯ ಒತ್ತಡ ಹಾಕಲಾಗುತ್ತಿದೆ.

ಕಾಮಗಾರಿಗೆ 17 ಗ್ರಾಮಗಳಲ್ಲಿ ಒಟ್ಟು 189 ಹೆಕ್ಟೇರ್ ಭೂಸ್ವಾಧೀನ ಮಾಡಲಾಗಿದೆ. ಈ ಪ್ರಕ್ರಿಯೆ ನಡೆಯುವಾಗ ದಾಖಲೀಕರಣದ ವೇಳೆ ಹಲವು ತಪ್ಪುಗಳು ನುಸುಳಿ, ಪದೇಪದೆ ಪರಿಷ್ಕರಣೆ ನಡೆಯುವಂತಾಗಿದೆ.

ಎರಡು ವರ್ಷ ಹಿಂದೆ ಎಲ್‌ಆ್ಯಂಡ್‌ಟಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಭಾರಿ ಮಳೆಗೆ ಭೂಕುಸಿತ ಉಂಟಾಗಿದ್ದರಿಂದ ಹೆದ್ದಾರಿ ಇಕ್ಕೆಲದ ಸ್ಲೋಪ್ ಪ್ರೊಟೆಕ್ಷನ್ ಕೆಲಸಗಳಿಗಾಗಿ ಹೆಚ್ಚುವರಿ ಭೂಸ್ವಾಧೀನ ಮಾಡುವ ಪ್ರಮೇಯ ಉಂಟಾಯಿತು. ಅದರಂತೆ ಹೆಚ್ಚುವರಿಯಾಗಿ 39.54 ಹೆಕ್ಟೇರ್ ಭೂಸ್ವಾಧೀನ ಮಾಡಬೇಕಾಗಿದೆ. ಹಿಂದೆ ಎಲ್‌ಆ್ಯಂಡ್‌ಟಿ ಕಂಪನಿ ಕಾಮಗಾರಿ ನಿರ್ವಹಿಸುತ್ತಿದ್ದಾಗಲೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು.

ಲ್ಯಾಪ್ಸ್ ಆದ ಅಧಿಸೂಚನೆ: ಹೆದ್ದಾರಿ ಕಾಯ್ದೆಯನ್ವಯ 2019ರ ಜನವರಿಯಲ್ಲಿ 3ಎ ಅಡಿ ಅಧಿಸೂಚನೆ ಪ್ರಕಟಿಸಲಾಗಿತ್ತು. ನಿಯಮದಂತೆ ವರ್ಷದೊಳಗೆ 3ಡಿ ಅನ್ವಯ ಅಧಿಸೂಚನೆ ಹೊರಡಿಸಲೇಬೇಕು. ಇಲ್ಲವಾದರೆ 3ಎ ಲ್ಯಾಪ್ಸ್ ಆಗುತ್ತದೆ. ಇಲ್ಲೂ ಅದೇ ಆಗಿದೆ. ಭೂಸ್ವಾಧೀನ ವಿಭಾಗದವರ ಸಹಯೋಗ ಇಲ್ಲದೆ ಲ್ಯಾಪ್ಸ್ ಆಗಿದೆ. ಮತ್ತೆ 2020ರ ಜುಲೈಯಲ್ಲಿ 3ಎ ಅನ್ವಯ ಅಧಿಸೂಚನೆ ಹೊರಡಿಸಿ, ಸಪ್ಟೆಂಬರ್ 1ರಂದು 3ಡಿ ಕೂಡ ಪ್ರಕಟಿಸಲಾಗಿದೆ. ಅಂತಿಮವಾಗಿ 3ಜಿ ಅನ್ವಯ ಪರಿಹಾರ ಆದೇಶ ಆಗಬೇಕು.

ಕಲ್ಲಡ್ಕದಲ್ಲಿ 6ಲೇನ್ ಫ್ಲೈಓವರ್: ಹೊಸ ಯೋಜನೆಯನ್ವಯ ಕಲ್ಲಡ್ಕದಲ್ಲಿ 6-ಲೇನ್‌ನ ಫ್ಲೈಓವರ್ ಹಾಗೂ ನಾಲ್ಕು ಅಂಡರ್‌ಪಾಸ್‌ಗಳು ನಿರ್ಮಾಣಗೊಳ್ಳಲಿವೆ. ಪಾಣೆಮಂಗಳೂರು ಹಾಗೂ ಉಪ್ಪಿನಂಗಡಿಯಲ್ಲಿ ನೇತ್ರಾವತಿಗೆ ಹೊಸ ಸೇತುವೆಗಳು ನಿರ್ಮಾಣಗೊಳ್ಳಬೇಕಿದ್ದು, ಹಿಂದೆ ಎಲ್‌ಆ್ಯಂಡ್‌ಟಿ ನಡೆಸಿದ ಭಾಗಶಃ ಕಾಮಗಾರಿ ಮುಂದುವರಿಯಲಿದೆ.

ಬಿ.ಸಿ.ರೋಡ್ ಭಾಗ ಮೊದಲು: ಈ ಕಾಮಗಾರಿಯಲ್ಲಿ ಎರಡು ಪ್ಯಾಕೇಜ್ ಇದ್ದು, ಮೊದಲ ಪ್ಯಾಕೇಜ್‌ನಲ್ಲಿ ಪೆರಿಯಶಾಂತಿಯಿಂದ ಬಿ.ಸಿ.ರೋಡ್ ವರೆಗೆ 45 ಕಿ.ಮೀ ಕಾಂಕ್ರಿಟೀಕರಣ, ಮೇಲ್ಸೇತುವೆ, ಕೆಳಸೇತುವೆ ಇತ್ಯಾದಿ ಬರಲಿದೆ. ಪ್ಯಾಕೇಜ್ 2ರಲ್ಲಿ ಅಡ್ಡಹೊಳೆಯಿಂದ ಪೆರಿಯಶಾಂತಿ ವರೆಗೆ 16 ಕಿ.ಮೀ ಕಾಮಗಾರಿ ನಡೆಯಲಿದೆ.

ಹಾಸನದ ಭೂಸ್ವಾಧೀನಾಧಿಕಾರಿ ಕಚೇರಿಯಿಂದ ಆಗುತ್ತಿರುವ ವಿಳಂಬದ ವಿಚಾರವನ್ನು ದ.ಕ ಜಿಲ್ಲಾಧಿಕಾರಿಯವರ ಗಮನಕ್ಕೂ ತಂದಿದ್ದೇವೆ. ಅವರು ಅದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಪರಿಹಾರದ ಆದೇಶ ಬಾಕಿ ಇದೆ. ಅದು ನಡೆದ ಕೂಡಲೇ ಟೆಂಡರ್ ಪ್ರಕ್ರಿಯೆ ತ್ವರಿತಗೊಳ್ಳಲಿದೆ. ಶಿಶು ಮೋಹನ್, ಯೋಜನಾ ನಿರ್ದೇಶಕರು ಎನ್‌ಎಚ್‌ಎಐ