ವಿಜಯಪುರದ ಜಿಪಂ ಸಭಾಂಗಣದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಪ್ರಯುಕ್ತ ನಡೆದ ಗ್ರಾಹಕರಿಗೆ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿವಂತಿಕೆ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಕುಂದರ್ ಉದ್ಘಾಟಿಸಿದರು. ನ್ಯಾಯವಾದಿ ಎಂ.ಜಿ. ಮಠಪತಿ, ಅಂಬಾದಾಸ ಕುಲಕರ್ಣಿ ಮತ್ತಿತರರಿದ್ದಾರೆ. 
ಜಿಲ್ಲೆ

ಗ್ರಾಹಕರು ಜಾಗರೂಕತೆಯಿಂದ ವ್ಯವಹರಿಸಿ

ಗಿರೀಶ ಸಗರ

ವಿಜಯಪುರ: ಈ-ಕಾಮರ್ಸ್ ನಲ್ಲಿ ವ್ಯಾಪಾರ ವಹಿವಾಟು ಮಾಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅಪರಿಚಿತ ವ್ಯಕ್ತಿಗಳು ಅವರ ಹಣವನ್ನು ಮೋಸದಿಂದ ಸೆಳೆಯುವ ಸಾಧ್ಯತೆ ಇದ್ದು, ಗ್ರಾಹಕರು ತಮ್ಮ ವಹಿವಾಟಿನ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಸಂದೇಶಗಳನ್ನೂ ನಂಬಿ ಲಿಂಕ್ ಕ್ಲಿಕ್ ಅಥವಾ ವೈಯಕ್ತಿಕ ಮಾಹಿತಿಗಳನ್ನು ನೀಡದೇ ಜಾಗರೂಕತೆಯಿಂದ ವ್ಯವಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಕುಂದರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆ ಸಹಯೋಗದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಗ್ರಾಹಕರಿಗೆ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿವಂತಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನಾಮಧೇಯ ವ್ಯಕ್ತಿಗಳು ನಿಮ್ಮ ಮೊಬೈಲ್‌ಗೆ ಸಂದೇಶ ಕಳಿಸಿ, ಹಣ ಹೂಡಿದರೆ ದ್ವಿಗುಣ ವಾಗುತ್ತದೆ ಎಂದು ನಂಬಿಸುತ್ತಾರೆ.

ಹಾಗೆಯೇ ನಿಮ್ಮ ಮೊಬೈಲ್‌ಗೆ ಓಟಿಪಿ ಬಂದಿದೆ ಎಂದು ನಬಿಸುತ್ತಾರೆ. ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಓಟಿಪಿ ಹೇಳಬಾರದು. ಈ ತರ ಯಾವುದೇ ಕರೆ, ಸಂದೇಶ ಬಂದರೆ ಹತ್ತಿರದ ಸೈಬರ್ ಕ್ರೈಂಗೆ ದೂರು ನೀಡಬೇಕು. ರಾಷ್ಟೀಯ ಹೆಲ್ಪ್‌ಲೈನ್ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದರೆ ತಕ್ಷಣವೇ ವರ್ಗಾವಣೆ ಆದ ಹಣವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿಜಯಪುರ ಬಳಕೆದಾರರ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಎಂ.ಜಿ. ಮಠಪತಿ ಉಪನ್ಯಾಸ ನೀಡಿ, ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯವಾಗಿದೆ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಬಳಕೆ ಮಾಡುವಾಗ ಅದರ ಬಗ್ಗೆ ಮಾಹಿತಿ ಹೊಂದಿರುವುದು ಅವಶ್ಯಕತೆಯಾಗಿದೆ.

ಜಾಲತಾಣದಲ್ಲಿ ಬರುವ ಮಾಹಿತಿಯನ್ನು ನಂಬಿ ವ್ಯವಹಾರ ಮಾಡಬಾರದು. ಕೂಲಂಕುಷವಾಗಿ ಪರಿಶೀಲಿಸಿ ಮುಂದುವರೆಯಬೇಕು ಎಂದರು.
ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗದ ಅಧ್ಯಕ್ಷ ಅಂಬಾದಾಸ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗದ ಸದಸ್ಯ ವಿದ್ಯಾ ಗಲಗಲಿ, ಕಾನೂನು ಮಾಪನ ಶಾಸ್ತ್ರ ಸಹಾಯಕ ನಿರ್ದೇಶಕ ಶ್ರೀಕಾಂತ ಬುರಾಣಪುರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಕೆಎಫ್‌ಸಿಎಸ್‌ಸಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಿ.ಆರ್. ನಾಯ್ಕೋಡಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ನ್ಯೂ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಕರೇಕಲ್ ಮತ್ತಿತರರಿದ್ದರು.
ಎಚ್.ಎ. ಮಮದಾಪೂರ ನಿರೂಪಿಸಿದರು. ನಾಮದೇವ ಚವಾಣ್ ವಂದಿಸಿದರು.