ಜಿಲ್ಲೆ

ಆನೇಕಲ್​ನಲ್ಲಿ ಪ್ರಾಣ ಹಿಂಡುವ ಗುಂಡಿಗಳು!

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ಪಟ್ಟಣದ ಬಹುತೇಕ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ಪರದಾಡುವಂತಾಗಿದೆ. ಆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಸ್ವಾಗತ ಕಮಾನು ಪ್ರಾರಂಭದಿಂದ ಕೆಎಸ್ಸಾರ್ಟಿಸಿ ಬಸ್​ ನಿಲ್ದಾಣದವರೆಗೆ ರಸ್ತೆಗಳು ಅಂಧ್ವಾನಗೊಂಡಿದ್ದು, ಇದೇ ರಸ್ತೆಯಲ್ಲಿ ನಿತ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಚಾರ ಮಾಡುತ್ತಿದ್ದರೂ ಕ್ರಮಕ್ಕೆ ಮುಂದಾಗದಿರುವುದು ಬೇಸರದ ಸಂಗತಿ. ಪಟ್ಟಣದಲ್ಲಿ ಪ್ರಮುಖ ರಸ್ತೆಯಲ್ಲಿನ ಗುಂಡಿಗಳು ಪ್ರತಿದಿನ ವಾಹನ ಸವಾರರಿಗೆ ಯಮರೂಪಿಗಳಾಗಿವೆ. ಸದ್ಯ ಮಳೆ ಸುರಿಯುತ್ತಿರುವ ಕಾರಣ ರಸ್ತೆ ಗುಂಡಿಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಮಳೆ ನೀರು ನಿಂತು ಗುಂಡಿ ಇದೆಯೋ ಇಲ್ಲವೋ ಎಂದು ಗೊತ್ತಾಗದೆ ಪ್ರತಿನಿತ್ಯ ಹತ್ತಾರು ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಳ್ಳುವಂತಾಗಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸ್ಥಳಿಯರು ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಮಳೆ ಬಂದಾಗ ಗುಂಡಿಗಳಿಗೆ ಜಲ್ಲಿ ಕಲ್ಲು ಹಾಕಿ ಹೋಗುತ್ತಿದ್ದು, ಶಾಶ್ವತ ಪರಿಹಾರ ಇಲ್ಲವಾಗಿದೆ. ಆನೇಕಲ್​ ಪಟ್ಟಣದ ಸ್ವಾಗತ ಕಮಾನಿನಿಂದ ಬಸ್​ ನಿಲ್ದಾಣದವರೆಗೆ ಸುಮಾರು ಎರಡು ಕಿಲೋಮೀಟರ್​ ರಸ್ತೆ ಇದ್ದು, ಕನಿಷ್ಠ 70ಕ್ಕೂ ಹೆಚ್ಚು ಗುಂಡಿಗಳು ನಿರ್ಮಾಣವಾಗಿವೆ. ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಟ್ರಾಫಿಕ್​ ಜಾಮ್​ ಉಂಟಾದ ವೇಳೆ ಮಳೆ ಬಂದರೆ ಬೈಕ್​ನಿಂದ ಕಾಲು ಕೆಳಗೆ ಇಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಪ್ರತಿನಿತ್ಯ ರಸ್ತೆಯಲ್ಲಿ ಕಿರಿಕಿರಿ ಅನುಭವಿಸಿ ಅಧಿಕಾರಿಗಳ ವಿರುದ್ಧ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದು, ಗುಂಡಿಗಳಲ್ಲಿ ಕಾರುಗಳ ಚಕ್ರಗಳು ಇಳಿದರೆ ಬಂಪರ್​ಗಳು ಡ್ಯಾಮೇಜ್​ ಆಗುತ್ತವೆ. ಒಟ್ಟಾರೆ ನಿತ್ಯ ಪಟ್ಟಣದಲ್ಲಿ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ವರ್ಷಗಳಿಂದ ಸಿಗದ ಪರಿಹಾರ: ಸ್ವಾಗತ ಕಮಾನಿನಿಂದ ಸ್ವಲ್ಪ ದೂರದಲ್ಲಿರುವ ಪೆಟ್ರೋಲ್​ ಬಂಕ್​ ಎದುರು, ಹನುಮಾನ್​ ದೇವಾಲಯದ ಎದುರ, ಬನ್ನೇರುಟ್ಟ ರಸ್ತೆ ತಿರುವು, ಸಬ್​ ರಿಜಿಸ್ಟ್ರಾರ್​ ಕಚೇರಿ ಎದುರು, ನಂದಿನಿ ಹಾಲಿನ ಬೂತ್​ ಎದುರು, ಪೊಲೀಸ್​ ಕ್ವಾರ್ರ್ಟಸ್​ ಎದುರು, ರಾವೇಂದ್ರ ಭವನ್​ ಹೋಟೆಲ್​ ಬಳಿ, ಹಳೇ ಆಸ್ಪತ್ರೆ, ಹೊಸೂರು ಮಾರ್ಗವಾಗಿ ಚಂದಾಪುರಕ್ಕೆ ಹೋಗುವ ಮಾರ್ಗ, ಪಟ್ಟಣದಿಂದ ಗುಮ್ಮಳಾಪುರ ಸಂಪರ್ಕ ಕಲ್ಪಿಸುವ ಚಿತ್ರಮಂದಿರದ ಎದುರು ಗುಂಡಿ ಗಂಡಾಂತರ ಹೆಚ್ಚಾಗಿದ್ದು, ಹಲವು ವರ್ಷಗಳಿಂದಲೂ ಸಮಸ್ಯೆಗೆ ಶಾಶ್ವತ ಪಡಿಹಾರ ಸಿಕ್ಕಿಲ್ಲ.