ಜಿಲ್ಲೆ

ಪ್ರಕೃತಿಯ ಮೇಲಿನ ಮಾರಕ ದಾಳಿಯೇ ವಿಕೋಪಗಳಿಗೆ ಕಾರಣ: ನಾಚಪ್ಪ ಅಸಮಾಧಾನ

ಮಡಿಕೇರಿ: ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಪ್ರಕೃತಿಯ ಮೇಲಿನ ದಾಳಿಯೇ ಇತ್ತೀಚೆಗೆ ಸಂಭವಿಸಿದ ವಿಕೋಪಗಳಿಗೆ ಕಾರಣ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಉತ್ತರ ಕೊಡಗಿನ ಮಾದಾಪುರದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.


ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಕ್ಕೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅನಿವಾಸಿ ಭಾರತೀಯರಿಗೆ, ರೆಸಾರ್ಟ್ ಮಾಫಿಯಾಗಳಿಗೆ, ದೊಡ್ಡ ಉದ್ಯಮಿಪತಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿ?್ಯತ್ತಿಗೆ ತೊಂದರೆಯಾಗಲಿದೆ. ಈ ಹಿಂದೆ ೨೦೧೮ ರಲ್ಲಿ ಸೂರ್ಲಬ್ಬಿ ನಾಡ್, ಮುತ್ತುನಾಡ್, ಪೊರಮಲೆನಾಡ್ ಮತ್ತು ಬದಿಗೇರಿನಾಡ್‌ನಲ್ಲಿ ಭೀಕರ ಜಲಕಂಟಕದಿಂದ ಅನಾಹುತ ಸಂಭವಿಸಿತ್ತು. ಅಲ್ಲದೆ ಅನೇಕ ಮನೆಗಳು ನಾಶವಾಗಿದ್ದವು. ಮುಂದೊಂದು ದಿನ ಕೇರಳದ ವಯನಾಡಿನ ರೂಪದ ದುರಂತ ಸಂಭವಿಸಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.


ಹಾರಂಗಿ ಜಲಾಶಯದ ಮಾದರಿಯಲ್ಲೇ ಕೇರಳದ ಮುಳ್ಳಪೆರಿಯರ್ ಅಣೆಕಟ್ಟೆಯಿಂದ ೨೦೧೮ ಮತ್ತು ಪ್ರಸ್ತುತ ವರ್ಷ ವಯನಾಡಿನಲ್ಲಿ ದುರಂತ ಸಂಭವಿಸಿದೆ ಎಂದು ಅಲ್ಲಿನ ವಿರೋಧ ಪಕ್ಷದ ಸಂಸತ್ ಸದಸ್ಯರು ಆಗಸ್ಟ್ ಮೊದಲ ವಾರದಲ್ಲಿ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಅನಾಹುತಕ್ಕೆ ಕಾರಣವಾದ ಅಣೆಕಟ್ಟೆಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಇದೇ ಮಾದರಿಯಲ್ಲಿ ನಾವು ಕೂಡ ಕೊಡಗಿನಲ್ಲಿ ಜಲಾಶಯದ ತೆರವಿಗೆ ಒತ್ತಾಯಿಸುವ ಕಾಲ ಬಂದಿದೆ. ಕಾರಣ ೨೦೧೯ ರಲ್ಲಿ ವಿಶ್ವ ಸಂಸ್ಥೆಯ ತಜ್ಞರು ಭಾರತದ ಹಳೆಯದಾದ ಸುಮಾರು ೨ಸಾವಿರ ಅಣೆಕಟ್ಟುಗಳನ್ನು ತೆರವುಗೊಳಿಸಬೇಕೆಂದು ವರದಿ ನೀಡಿದ್ದಾರೆ. ಕೊಡವ ಲ್ಯಾಂಡ್ ಉಳಿಯಬೇಕಾದರೆ ಜಲಾಶಯದ ತೆರವು ಅನಿವಾರ್ಯವಾಗಿದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು.


೧೯೬೦ ರಲ್ಲಿ ಮುಂಬಯಿಯ ದೊಡ್ಡ ಉದ್ಯಮಿಯೊಬ್ಬರಿಗೆ ಆನೆಚೌಕೂರಿನಿಂದ ಕುಶಾಲನಗರದವರೆಗಿನ ೩೦ ಸಾವಿರ ಹೆಕ್ಟೇರ್ ಪ್ರದೇಶವನ್ನು ಸುಗಂಧ ಹುಲ್ಲು ಬೆಳೆಸಲು ನೀಡಲಾಗಿತ್ತು. ಈ ಸಂದರ್ಭ ಮಳೆಕಾಡುಗಳನ್ನು ನಾಶ ಮಾಡಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಇಂದು ಹವಾಗುಣದ ಅಸಮಾತೋಲನ ಉಂಟಾಗುತ್ತಿದೆ ಎಂದು ಆರೋಪಿಸಿದ ಅವರು, ಕೊಡಗು ಪ್ರದೇಶದಲ್ಲಿ ಅಣೆಕಟ್ಟೆ, ವಿಲ್ಲಾ, ರೆಸಾರ್ಟ್, ಟೌನ್ ಶಿಪ್ ಗಳ ನಿರ್ಮಾಣದಂತಹ ದುಸ್ಸಾಹಸಗಳಿಗೆ ಸರ್ಕಾರ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.


ಟೌನ್ ಶಿಪ್, ನಗರೀಕರಣ, ವಿಲ್ಲಾ, ರೆಸಾರ್ಟ್‌ಗಳ ನಿರ್ಮಾಣದಿಂದ ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದೆ. ಇದನ್ನು ತಡೆದೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶಕ್ಕೆ, ಭೂದೇವಿಗೆ ಇಲ್ಲವಾದ ಕಾರಣ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.


ಜಾಗೃತಿ ಕಾರ್ಯಕ್ರಮದಲ್ಲಿ ನಾಪಂಡ ರಮ್ಯ, ಮೇದೂರ ಪ್ರೀತಿಕಾ, ನಾಪಂಡ ಅರುಣ, ಮೇದೂರ ಕಂಠಿ, ಮಾಳೆಯಂಡ ಜಗದೀಶ್, ಬಾಚಿನಾಡಂಡ ಗಿರೀಶ್, ಬಾಚಿನಾಡಂಡ ಗಣೇಶ್, ಮೇದೂರ ಚರ್ಮಣ, ಮುದ್ದಂಡ ಗಪ್ಪು, ಮುದ್ದಂಡ ಲಕ್ಷ್ಮಣ್ ಹಾಗೂ ಮಾದಾಪುರದ ಸುತ್ತಮುತ್ತಲಿನ ಕೊಡವ, ಕೊಡವತಿಯರು ಮಾನವ ಸರಪಳಿಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.