ಜಿಲ್ಲೆ

ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ

Dakshina Kannada

ಬಂಟ್ವಾಳ: ಮೆಲ್ಕಾರ್‌ಬಳಿ ಗುರುವಾರ ತಡರಾತ್ರಿ ಬಂಟ್ವಾಳ ನಗರ ಠಾಣೆ ಎಎಸ್‌ಐ ಶೈಲೇಶ್ ಮತ್ತು ಮೂವರು ಪೊಲೀಸರ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಘಟನೆ ವೇಳೆ ಸಾರ್ವಜನಿಕರು ಆರೋಪಿಯನ್ನು ಹಿಡಿಯುವ ಸಂದರ್ಭ ಥಳಿಸಿದ್ದರಿಂದ ಆರೋಪಿ ಗೋಳ್ತಮಜಲು ನಿವಾಸಿ ಅಬ್ದುಲ್ ಸಲಾಂ(28) ಎಂಬಾತ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ಲಾರಿ ಚಾಲಕರು ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿರುವ ಮಾಹಿತಿ ಮೇರೆಗೆ ನಗರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೈಲೇಶ್ ಟಿ. ಇಲಾಖಾ ವಾಹನದಲ್ಲಿ ಕಾನ್‌ಸ್ಟೆಬಲ್ ಜತೆ ತೆರಳಿದ್ದು, ಈ ವೇಳೆ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಅಬ್ದುಲ್ ಸಲಾಂ ಎಂಬಾತನ ಬಳಿ ತೆರಳಿ ಗಲಾಟೆ ನಿಯಂತ್ರಿಸಲು ಯತ್ನಿಸಿದಾಗ ಆತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಕೈಯಲ್ಲಿದ್ದ ಕಬ್ಬಿಣದ ರಾಡಿನಲ್ಲಿ ಏಕಾಏಕಿಯಾಗಿ ಹಲ್ಲೆ ನಡೆಸಿದ್ದಾನೆ.

ಸ್ಥಳದಲ್ಲಿದ್ದ ಇಲಾಖಾ ವಾಹನವನ್ನು ರಾಡ್‌ನಿಂದ ಹೊಡೆದು ಕಾಲಿನಿಂದ ತುಳಿದು ಜಖಂಗೊಳಿಸಿದ್ದಾನೆ. ಈ ವೇಳೆ ಸಾರ್ವಜನಿಕರು, ಹಲ್ಲೆ ನಡೆಯುವುದನ್ನು ತಡೆಯಲು ಬಂದು ಆರೋಪಿಯನ್ನು ಹಿಡಿಯುವ ಸಂದರ್ಭ, ಆತನಿಗೂ ಗಾಯವಾಗಿದೆ. ಹಲ್ಲೆಗೊಳಗಾದ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೈಲೇಶ್ ಟಿ. ಮತ್ತು ಇತರ ಮೂವರು ಪೊಲೀಸರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.