ಕುಂದಾಪುರದ ಗುಲ್ವಾಡಿ ಹೊಳೆ ಬದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿದು ಗುಡಿಸಲಿನಲ್ಲಿ ಬದುಕುತ್ತಿರುವ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದವರ ಗುಡಿಸಲನ್ನು ಧ್ವಂಸ ಮಾಡಿರುವುದು  
ಜಿಲ್ಲೆ

ಗುಡಿಸಲಿಗೆ ನುಗ್ಗಿ ಮಾರಣಾಂತಿಕ ಹಲ್ಲೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ, ಪ್ರತಿಭಟನೆ ಎಚ್ಚರಿಕೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಕುಂದಾಪುರದ ಗುಲ್ವಾಡಿ ಹೊಳೆ ಬದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿದು ಗುಡಿಸಲಿನಲ್ಲಿ ಬದುಕುತ್ತಿರುವ ಅತೀ ಸೂಕ್ಷ್ಮ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದವರ ಗುಡಿಸಲಿಗೆ ನುಗ್ಗಿ ಏಕಾಏಕಿ ನುಗ್ಗಿ ಹೆಂಗಸು ಮಕ್ಕಳೆಂದು ನೋಡದೆ ಎಲ್ಲರ ಮೇಲೂ ಆಯುಧಗಳ ಮೂಲಕ ಸ್ಥಳೀಯ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ ದಾಂಧಲೆ ಮೆರೆದಿದ್ದಾರೆ. ಈ ರೀತಿ ದೌರ್ಜನ್ಯ ಮೆರೆದ ತಪ್ಪಿತಸ್ತರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕೆಂದು ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.


ಮೀನು ಹಿಡಿಯಲು ನಿರ್ಬಂಧ

ಇತ್ತೀಚೆಗೆ ಕುಂದಾಪುರದ ಗುಲ್ವಾಡಿ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ಸ್ಥಳೀಯ ಗೂಂಡಾಗಳು ಮೀನು ಹಿಡಿಯಲು ನೀರಿಗಿಳಿಯದಂತೆ ನಿರ್ಬಂಧ ಹೇರಿರುವ ಮತ್ತು ಜೀವ ಬೆದರಿಕೆ ನೀಡಿರುವ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆ ಗಮನಕ್ಕೆ ತರಲಾಗಿತ್ತು. ಈಗ ಮತ್ತೆ ಸ್ಥಳೀಯ ಗೂಂಡಾಗಳು ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ನುಗ್ಗಿ ದಾಂಧಲೆ ಮೆರೆದಿದ್ದಾರೆ. ಗುರುವಾರ ಬೆಳಗ್ಗೆ ಸುಮಾರು 10.30ಕ್ಕೆ ಮೀನು ಹಿಡಿದು ತಮ್ಮ ಬಲೆಯಿಂದ ಮೀನು ಬಿಡಿಸುತ್ತಿದ್ದ ವೇಳೆ ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ನಾಲ್ಕೈದು ಜನರ ಗುಂಪು ಮಾರಕಾಯುಧದೊಂದಿಗೆ ನುಗ್ಗಿ ಅಲ್ಲಿದ್ದ ಅಲೆಮಾರಿ ಸಮುದಾಯದ ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಾಮೂಹಿಕವಾಗಿ ದೊಣ್ಣೆಯ ಮೂಲಕ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜಾತಿ ನಿಂದನೆಗೊಳಪಡಿಸಿ ಊರು ಬೀಡಬೇಕೆಂದು ಜೀವಬೆದರಿಕೆ ಒಡ್ಡಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಲೇ ಈ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು ಹಾಗೂ ಮಾರಕಾಯುಧಗಳಿಂದ ಹಲ್ಲೆ ನಡೆಸಿ ದಾಂಧಲೆ ಮೆರೆದ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಉಡುಪಿ ಜಿಲ್ಲೆಯಲ್ಲಿರುವ ಈ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿಸಿಕೊಡಬೇಕು ಇಲ್ಲದಿದ್ದಲ್ಲ ಮುಂದಿನ ದಿನ ಸಂಬಂಧಪಟ್ಟ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.