ಬೆಂಗಳೂರು: ಬಡತನ ರೇಖೆಗಿಂತ ಕೆಳಗಿನವರಲ್ಲದ ವಿವಿಧ ಇಲಾಖೆ, ನಿಗಮ, ಮಂಡಳಿ, ಪ್ರಾಧಿಕಾರ ಹಾಗೂ ವಿ.ವಿ.ಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಬಿಪಿಎಲ್ ಪಡಿತರ ಚೀಟಿ ಬಳಸುತ್ತಿರುವುದು ಗಮನಕ್ಕೆ ಬಂದಿದ್ದು, ಹಿಂತಿರುಗಿಸಿ ರದ್ದು ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅಧಿಕಾರಿಗಳು, ನೌಕರರು ಅಥವಾ ಅವಲಂಬಿತ ಕುಟುಂಬದ ಸದಸ್ಯ ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿದ್ದರೆ ತಿಂಗಳೊಳಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಒಪ್ಪಿಸಿ ರದ್ದುಪಡಿಸಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ ಆದೇಶಿಸಿದ್ದಾರೆ.
ತಿಂಗಳ ನಂತರವೂ ಪಡಿತರ ಚೀಟಿ ಹೊಂದಿರುವ ಬಗ್ಗೆ ಮಾಹಿತಿ ಇಲ್ಲವೆ ದೂರುಗಳು ಸ್ವೀಕೃತವಾದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಕ್ರಿಮಿನಲ್ ದಾವೆ ಹೂಡಲಾಗುವುದು. ಅಲ್ಲದೆ, ಅವರಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಕಲಿ ದಾಖಲೆಗಳನ್ನು ನೀಡಿ ಅನಧಿಕೃತ ರೇಷನ್ ಕಾರ್ಡ್ ಪಡೆದಿರುವ ಸರ್ಕಾರಿ ನೌಕರರಿಗೆ ಈ ಹಿಂದೆಯೇ ಆಹಾರ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.