ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನವನ್ನು ಸಾರ್ವಜನಿಕ ಉಪಯೋಗಕ್ಕೆ ಹಾಗೂ ವಾಹನ ನಿಲುಗಡೆಗೆ ಮೂರು ದಿನಗಳಲ್ಲಿ ಮುಕ್ತಗೊಳಿಸಬೇಕು. ಇಲ್ಲದಿದ್ದಲ್ಲಿ ಏ.9ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ವರ್ಷದಲ್ಲಿ ಎರಡು ಬಾರಿ ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿದ ಮಾತ್ರಕ್ಕೆ ಆ ಮೈದಾನ ನಮ್ಮದು ಎನ್ನುವ ಹುಂಬತನವನ್ನು ಒಪ್ಪಲು ಸಾಧ್ಯವಿಲ್ಲ. ದೇಶದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗುತ್ತದೆ ಎಂಬುದು ತಿಳಿದೇ ಮಾಡಿರುವ ಷಡ್ಯಂತ್ರವಿದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
2012ರಲ್ಲಿ ಈ ಮೈದಾನವನ್ನು ಪಾರ್ಕ್ ಹಾಗೂ ಸಾರ್ವಜನಿಕ ಬಳಕೆಯ ಸ್ಥಳ ಎಂದು ನಮೂದು ಮಾಡಲಾಗಿದೆ. ಆದರೆ 2018ರಲ್ಲಿ ಕೆಲವು ಅಧಿಕಾರಿಗಳನ್ನು ದಿಕ್ಕುತಪ್ಪಿಸಿ ಅದನ್ನು ವಕ್ಫ್ ಆಸ್ತಿ ಎಂದು ಅಕ್ರಮವಾಗಿ ದಾಖಲೆ ಸೃಷ್ಟಿಸಲಾಗಿದೆ. ಈ ನಕಲಿ ದಾಖಲೆಗಳು ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಎಲ್ಲ ರೀತಿಯ ಹೋರಾಟಕ್ಕೆ ಬಿಜೆಪಿ ಸಿದ್ಧವಿದೆ ಎಂದರು.
ವಕ್ಫ್ ಹೆಸರಿನಲ್ಲಿ ನಗರದ ಸಾರ್ವಜನಿಕರ, ರೈತರ, ಪಾಲಿಕೆ ಹಾಗೂ ಹಿಂದು ದೇವಾಲಯಗಳ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಇದರ ಹಿಂದೆ ಮುಸ್ಲಿಂ ಲ್ಯಾಂಡ್ ಮಾಫಿಯಾ ಕೆಲಸ ಮಾಡುತ್ತಿದೆ. ಹಿರಿಯರು ವರ್ಷಕ್ಕೆ ಎರಡು ಬಾರಿ ನಮಾಜ್‌ಗೆ ಅವಕಾಶ ಕೊಟ್ಟಿದ್ದರು. ಅಷ್ಟಕ್ಕೇ ನಮ್ಮ ಸ್ವತ್ತು ಎಂದು ಏಕಾಏಕಿ ಬೇಲಿ ಹಾಕುವ ಮನಸ್ಥಿತಿ ಏಕೆ ಬಂತೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ದತ್ತಾತ್ರಿ, ಮಾಲತೇಶ್, ಮಂಜುನಾಥ್, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.