ಚನ್ನರಾಯಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಗಳ ಸಂಕೀರ್ಣವನ್ನು ಶಾಸಕ ಸಿ.ಎನ್.ಬಾಲಕೃಷ್ಣ ವೀಕ್ಷಿಸಿದರು. 
ಜಿಲ್ಲೆ

ನ್ಯಾಯಾಲಯ ಸಂಕೀರ್ಣ ಕಾಮಗಾರಿ ಪೂರ್ಣಕ್ಕೆ ಗಡುವು

ಎಂ.ರವಿ

ಚನ್ನರಾಯಪಟ್ಟಣ: ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯಗಳ ಸಂಕೀರ್ಣದ ಕಾಮಗಾರಿಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಸೋಮವಾರ ವೀಕ್ಷಿಸಿ 2025ರ ಫೆಬ್ರುವರಿ ಒಳಗೆ ಕಾಮಗಾರಿ ಮುಗಿದು, ನ್ಯಾಯಾಧೀಶರು, ವಕೀಲರುಗಳು ಹಾಗೂ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಪಟ್ಟಣದ ಹಳೇ ನ್ಯಾಯಾಲಯಗಳ ಸಂಕೀರ್ಣವನ್ನು ತೆರವುಗೊಳಿಸಿ ಕಳೆದ ಕೆಲ ವರ್ಷಗಳ ಹಿಂದೆ ಹೊಸ ನ್ಯಾಯಾಲಯಗಳ ಸಂಕೀರ್ಣದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿದ್ದ ಕೆಲಸಕ್ಕೆ ಈಗ ಮತ್ತೆ ವೇಗ ದೊರೆತಿದ್ದು, ಇದರಿಂದ ಶಾಸಕರು, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಡಿಸೆಂಬರ್‌ಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಶೇ.30ರಷ್ಟು ಕಾಮಗಾರಿ ಬಾಕಿ ಉಳಿದಿದ್ದು, ಕಾರಣಾಂತರದಿಂದ ವಿಳಂಬವಾಗಿತ್ತು. ಆದರೆ ಈಗ ನ್ಯಾಯಾಲಯಗಳ ಕಲಾಪಕ್ಕೆ ತೊಂದರೆಯಾಗುತ್ತಿರುವ ಕಾರಣ 2-3 ಬಾರಿ ವೀಕ್ಷಣೆ ಮಾಡಿ ಬೇಗ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕಕ್ಷಿದಾರರು ಹಾಗೂ ವಕೀಲರ ವಾಹನ ನಿಲುಗಡೆಗೂ ಸ್ಥಳವಕಾಶ ಕಲ್ಪಿಸಲಾಗುವುದು, ಕೋರ್ಟ್ ಆವರಣದಲ್ಲಿ ವಕೀಲರು, ಸಾರ್ವಜನಿಕ ಶೌಚಗೃಹಗಳ ಬೇಡಿಕೆ ಸಲ್ಲಿಸಿರುವುದರಿಂದ ನ್ಯಾಯಾಂಗ ಇಲಾಖೆ ಅನುಮತಿ ನೀಡಿದರೆ ಪುರಸಭಾ ವತಿಯಿಂದ ಪ್ರತ್ಯೇಕವಾಗಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗುವುದೆಂದರು.

ಪ್ರಸಕ್ತ ನಿರ್ಮಾಣವಾಗುತ್ತಿರುವ 10 ಕೋಟಿ ರೂ. ವೆಚ್ಚದ ನ್ಯಾಯಾಲಯ ಸಂಕೀರ್ಣವಲ್ಲದೆ ಮೇಲಂತಸ್ತಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 8 ಕೋಟಿ ರೂ.ಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಮುಖ್ಯ ಕಾರ್ಯದರ್ಶಿ ಅವರ ಹಂತದಲ್ಲಿ ಅನುಮೋದನೆಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪಟ್ಟಣದಲ್ಲಿನ ವಿವಿಧ ಕೋರ್ಟ್‌ಗಳಲ್ಲಿ 13,500 ಪ್ರಕರಣಗಳು ಬಾಕಿ ಇರುವ ಬಗ್ಗೆ ಮಾಹಿತಿ ದೊರೆತಿದ್ದು, ಹೆಚ್ಚುವರಿ ನ್ಯಾಯಾಲಯ ಸ್ಥಾಪಿತವಾದರೆ ಪೂರ್ಣ ಪ್ರಮಾಣದ ನ್ಯಾಯಾಂಗ ವ್ಯವಸ್ಥೆಗೆ ಸುಲಲಿತವಾದ, ರಚನಾತ್ಮಕವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಂದರ್ ರಾಜ್, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಬಸವರಾಜ್, ಖಜಾಂಚಿ ಮಂಜೇಶ್ ಹಾಗೂ ಪದಾಧಿಕಾರಿಗಳು, ಎಇಇ ರುಕ್ಮಿಣಿ, ಗುತ್ತಿಗೆದಾರ ಸೋಮಶೇಖರ್ ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಜರಿದ್ದರು.