ದಾರವಾಡ: ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಸುಮಾರು 1,000ಕ್ಕೂ ಹೆಚ್ಚು ಜನರಿಂದ ಸುಮಾರು 430 ಅಹವಾಲುಗಳು ಸಲ್ಲಿಕೆಯಾಗಿವೆ. ಶೇ. 50ರಿಂದ 60ರಷ್ಟು ಸಮಸ್ಯೆಗಳು ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗುವಂಥ ಪ್ರಕರಣಗಳಿವೆ. ಜಿಲ್ಲಾಡಳಿತದ ಮಟ್ಟದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆಯಾ ಇಲಾಖೆ ಅಧಿಕಾರಿಗಳಿಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಜನತಾ ದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ತಿಂಗಳಿಗೊಮ್ಮೆ ಮುಂದುವರಿಸಲಾಗುವುದು ಎಂದರು.
ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಎಲ್ಲ ಇಲಾಖೆಗಳ ಅಽಕಾರಿಗಳಿಗೆ ಸೂಚಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಹಿಂಗಾರು ಹಂಗಾಮಿನಲ್ಲಿ ಮೇವಿನ ಬೆಳೆ ಬೆಳೆಯಲು ಮೇವಿನ ಬೀಜದ ಕಿರುಪೊಟ್ಟಣಗಳ ವಿತರಣೆಗೆ ಕ್ರಮ ವಹಿಸಲಾಗಿದೆ. ಬರ ಪರಿಹಾರ ನೀಡುವಂತೆ ಸರ್ಕಾರದಿಂದ ಕೇಂದ್ರಕ್ಕೆ ಪತ್ರ ಬರೆದು ವಿನಂತಿಸಲಾಗಿದೆ ಎಂದರು.
ಜಿಲ್ಲೆಯ ಅಣ್ಣಿಗೇರಿ, ಅಳ್ನಾವರ, ಕಲಘಟಗಿ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ಬರ ತಾಲೂಕುಗಳು ಘೋಷಣೆಯಾಗಿವೆ. ಕನಿಷ್ಠ ಶೇ. 60ರಷ್ಟು ಬೆಳೆ ಹಾನಿಯಾಗಿರಬೇಕು. ಬರಪೀಡಿತ ಘೋಷಣೆ ರಾಜ್ಯ ಸರ್ಕಾರದ ಹಂತದಲ್ಲಿ ಇಲ್ಲ. ತಾಂತ್ರಿಕ ಮಾನದಂಡಗಳು ಸರಳೀಕರಣ ಆಗಬೇಕು ಎಂದರು.