ಜಿಲ್ಲೆ

ಜಿಲ್ಲಾಡಳಿತಕ್ಕೆ ಕಡೇ ಗಡುವು

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಅರ್ಕಾವತಿ ನದಿಪಾತ್ರದ ಕೆರೆಗಳಿಗೆ ನಗರಸಭೆ ವ್ಯಾಪ್ತಿಯ ಕೊಳಚೆ ಹಾಗೂ ಕೈಗಾರಿಕೆ ನೀರು ಸೇರದಂತೆ ಕ್ರಮವಹಿಸಲು ಮತ್ತು 3ನೇ ಹಂತದ ಶುದ್ಧೀಕರಣ ಘಟಕ ಸ್ಥಾಪಿಸಲು ಆಗ್ರಹಿಸಿ ಜ.26ರ ಗಣರಾಜ್ಯೋತ್ಸವದಂದು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದ ಕಪ್ಪು ಬಾವುಟ ಪ್ರದರ್ಶನ ನಿರ್ಧಾರದಿಂದ ಹಿಂದೆ ಸರಿದಿರುವ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿ ಸದಸ್ಯರು ಕಾಲಾವಧಿಯಲ್ಲಿ ಕ್ರಮಕ್ಕೆ ಮುಂದಾಗದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಇದು ಜಿಲ್ಲಾಡಳಿತಕ್ಕೆ ಕಡೇ ಅವಕಾಶವಾಗಿದ್ದು, ಮತ್ತೊಮ್ಮೆ ಸಂಧಾನ ಮಾತುಕತೆತಯಂತ ಪ್ರಹಸನಕ್ಕೆ ಸಮ್ಮತವಿಲ್ಲ ಎಂಬುದಾಗಿ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ದೊಡ್ಡತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಪಂ ಕೆರೆ ಹೋರಾಟ ಸಮಿತಿ ಸದಸ್ಯರು ಜಿಲ್ಲಾಡಳಿತದ ಮುಂದಿನ ನಡೆ ಆಧರಿಸಿ ಹೋರಾಟದ ರೂಪುರೇಷೆ ಸಿದ್ದಪಡಿಸಲಿದ್ದಾರೆ.

ಪ್ರತ್ಯೇಕ ಸಭೆಯಲ್ಲಿ ನಿರ್ಧಾರ: ಕಪ್ಪುಬಟ್ಟೆ ಪ್ರದರ್ಶನ ಹಿನ್ನೆಲೆಯಲ್ಲಿ ಚಿಕ್ಕತುಮಕೂರು ಕೆರೆ ಬಳಿ ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ಶಿವಶಂಕರ್ ಮತ್ತು ಜಿಪಂ ಸಿಇಒ ಅನುರಾಧಾ ಸಮ್ಮುಖದಲ್ಲಿ ಕರೆಯಲಾಗಿದ್ದ ಸಂಧಾನ ಸಭೆಯಲ್ಲಿ ಹಲವು ವಿಷಯಗಳು ಚರ್ಚೆಯಾಗಿದ್ದವು. ಸ್ಥಳೀಯ ಮುಖಂಡರೊಂದಿಗೆ ಇನ್ನೊಮ್ಮೆ ಚರ್ಚಿಸಿ, ಅಂತಿಮ ತೀರ್ಮಾನವನ್ನು ಜಿಲ್ಲಾಡಳಿತಕ್ಕೆ ತಿಳಿಸುವುದಾಗಿ ತಿಳಿಸಿದ್ದರು. ಇದರ ಅನ್ವಯ ಪ್ರತ್ಯೇಕ ಸಭೆ ನಡೆಸಿದ ಮುಖಂಡರು ಕಪ್ಪು ಬಾವುಟ ಪ್ರದರ್ಶನದಿಂದ ಹಿಂದೆ ಸರಿದಿದ್ದರು.

ಸಭೆಯಲ್ಲಿ ಆಕ್ರೋಶ: ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ಹಾಗೂ ಕಾರ್ಖಾನೆಗಳ ರಾಸಾಯನಿಕ ನೀರಿನಿಂದ ಅರ್ಕಾವತಿ ನದಿ ಪಾತ್ರದ ಮಜರಾಹೊಸಹಳ್ಳಿ, ದೊಡ್ಡತುಮಕೂರು, ಚಿಕ್ಕತುಮಕೂರು ಭಾಗದ ಕೆರೆಗಳು ಮಲಿನಗೊಳ್ಳುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ವಿಡಿಯೋ ಮೂಲಕ ಮಾಹಿತಿ ನೀಡಿದರೂ ಕ್ರಮವಹಿಸಿಲ್ಲ. ಕೆರೆಗಳು ಮಲಿನಗೊಳ್ಳುವುದನ್ನು ತಡೆಯುವಂತೆ ಆಗ್ರಹಿಸಿ ಅನೇಕ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅಲ್ಲದೆ ಈ ಭಾಗದ ಕುಡಿಯುವ ನೀರಿನ ಘಟಕಗಳಲ್ಲಿನ ನೀರು ಕುಡಿಯಲೂ ಯೋಗ್ಯವಾಗಿಲ್ಲ ಎಂಬ ವರದಿ ಬಂದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಪರಿಣಾಮ ಹಲವು ಕಾಯಿಲೆಗಳು ಗ್ರಾಮಸ್ಥರನ್ನು ಕಾಡುತ್ತಿವೆ ಎಂದು ಹೋರಾಟಗಾರರು ಸಭೆಯ ಗಮನ ಸೆಳೆದಿದ್ದರು.

ತಿಂಗಳಲ್ಲಿ ಸ್ಥಳಾಂತರ: ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ಶಿವಶಂಕರ್ ಕಲಷಿತ ನೀರಿನ ಶುದ್ಧೀಕರಣಕ್ಕೆ ಅಗತ್ಯವಾದ ಎಸ್‌ಟಿಪಿ ಘಟಕವನ್ನು ಸ್ಥಾಪಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಎಫ್‌ಡಿಯಲ್ಲಿ ಕಡತ ಇದ್ದು, ಶೀಘ್ರ ಅನುಮೋದನೆ ದೊರೆಯುವ ಸಾಧ್ಯತೆಯಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯನ್ನು ಪಿಡಬ್ಲ್ಯೂಡಿ ಕಚೇರಿಯ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮವಹಿಸಲಾಗಿದ್ದು, 1 ತಿಂಗಳಲ್ಲಿ ಸ್ಥಳಾಂತರ ಆಗಲಿದೆ. ಜತೆಗೆ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕಾಡನೂರು ಹಾಗೂ ಅರಳುಮಲ್ಲಿಗೆಯಿಂದ ನೀರು ಪೂರೈಸಲು ಕಾಮಗಾರಿಗೆ ಕ್ರಮವಹಿಸಲಾಗಿದೆ. ಕಾಡನೂರಿನಿಂದ ನೀರು ಬರುವವರೆಗೂ ತಾತ್ಕಾಲಿಕ ಕುಡಿಯುವ ನೀರು ವ್ಯವಸ್ಥೆಯನ್ನು ಜಕ್ಕಲಮಡು ಜಲಾಶಯದಿಂದ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಕೈಗಾರಿಕೆಗಳು ರಾಸಾಯನಿಕ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಅವರಿಗೆ ನೋಟಿಸ್ ನೀಡಿ, ಅದಕ್ಕೂ ಸ್ಪಂದಿಸದಿದ್ದರೆ ಆ ಕೈಗಾರಿಕೆಗಳನ್ನು ಬಂದ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಇವುಗಳು ಎಷ್ಟರ ಮಟ್ಟಿಗೆ ಪಾಲನೆಯಾಗಲಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೋರಾಟಗಾರರು ಮುಂದಿನ ನಡೆಯ ಬಗ್ಗೆ ತಾಲೀಮು ನಡೆಸುತ್ತಿದ್ದಾರೆ.

ಮುಂದಿನ ಅಧಿಕಾರಿಗಳಿಗೆ ಮಾಹಿತಿ ನೀಡಿ: ಪ್ರಸ್ತುತ ಸರ್ಕಾರ ಅಧಿಕಾರಿಗಳ ವರ್ಗಾವಣೆ ಮಾಡಿದೆ, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ಶಿವಶಂಕರ್ ವರ್ಗವಾಗಿದ್ದಾರೆ. ಪ್ರಭಾರ ಜಿಲ್ಲಾಧಿಕಾರಿಯಾಗಿ ಡಾ.ಕೆ.ಎನ್.ಅನುರಾಧಾ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಅಧಿಕಾರಿಗಳಿಗೆ ಅಧಿಕಾರ ವರ್ಗಾಯಿಸುವಾಗ ಈ ವಿಷಯದ ಗಂಭೀರತೆ ಬಗ್ಗೆ ತಿಳಿಸಿರಬೇಕು ಎಂದು ಹೋರಾಟಗಾರರು ಮನವಿ ಪತ್ರ ಸಲ್ಲಿಸಿದ್ದಾರೆ.

ಮೂಲಸೌಕರ್ಯಗಳನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸುವ ಭರವಸೆ ಹಿನ್ನೆಲೆಯಲ್ಲಿ ಕಪ್ಪುಬಾವುಟ ಪ್ರದರ್ಶನದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳಲಾಗಿದೆ. ಭರವಸೆ ನೀಡಿರುವ ಕಾಲಾವಧಿಯಲ್ಲಿ ಮೂಲಸೌಕರ್ಯ ಕಲ್ಪಿಸದಿದ್ದರೆ ನಮ್ಮ ಮುಂದಿನ ಹೋರಾಟ ಗಂಭೀರವಾಗಿರಲಿದೆ.

ವಸಂತ್‌ಕುಮಾರ್, ಸಮಿತಿ ಸದಸ್ಯ