ವಿಜಯಪುರ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಇಂದು ಕೈ-ಕಾಲು ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಶವ ಸಿಕ್ಕಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಮಲ್ಲನಗೌಡ ಬಿರಾದಾರ (47) ಎಂಬ ವ್ಯಕ್ತಿಯ ಶವ ಇದಾಗಿದೆ. ಈತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಾಳ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಹೊಲದ ಪಕ್ಕದ ನದಿಗೆ ಆಕಳನ್ನು ಸ್ನಾನ ಮಾಡಿಸಲು ಕರೆದೊಯ್ದಿದ್ದ. ಈ ಸಂದರ್ಭದಲ್ಲಿ ಈತ ನಾಪತ್ತೆಯಾಗಿದ್ದು, ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹುಡುಕಾಟ ನಡೆಸಿದ್ದರು.
ಅದಾಗ್ಯೂ ಮಲ್ಲನಗೌಡನ ಪತ್ತೆ ಆಗಿರಲಿಲ್ಲ. ಆದರೆ ಇಂದು ಈತನ ಶವ ಕೈ-ಕಾಲು ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಶೀಲನೆ ನಡೆಸಿರುವ ಪೊಲೀಸರು ಕೈಕಾಲನ್ನು ಮೊಸಳೆ ತಿಂದು ಹಾಕಿದಂತೆ ಕಂಡುಬಂದಿರುವುದರಿಂದ ಈತನನ್ನು ಅಂದು ಮೊಸಳೆ ಎಳೆದೊಯ್ದಿರಬಹುದು ಎಂದು ಅಂದಾಜಿಸಿದ್ದಾರೆ.