ಕುಂದಾಪುರ: ನಗರದ ಚಿಕ್ಕನಸಾಲು ರಸ್ತೆಯಲ್ಲಿ ಖಾಸಗಿ ಹೋಟೆಲ್ ಮುಂಭಾಗದಲ್ಲಿರುವ ನಾಗರಾಜ ಎಂಬುವರ ಬಾಡಿಗೆ ಕಟ್ಟಡದಲ್ಲಿ ಅಕ್ಕಸಾಲಿಗನಾಗಿದ್ದ ಸಂತೋಷ್ ಆಚಾರ್ಯ (45) ಎಂಬುವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂತೋಷ್ ಅವಿವಾಹಿತರಾಗಿದ್ದು, 25 ವರ್ಷಗಳಿಂದ ಕುಂದಾಪುರದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಉಪ್ಪೂರಿನಲ್ಲಿರುವ ತಮ್ಮ ಮನಗೆ ಹೋಗಿ ಬರುತ್ತಿದ್ದರು.
ನಾಗರ ಪಂಚಮಿಯ ಪ್ರಯುಕ್ತ ಅಣ್ಣ ಮನೆಗೆ ಬರದಿರುವ ಕುರಿತು ವಿಚಾರಿಸಲು ಅವರ ಸಹೋದರ ಸುರೇಶ್ ಆಚಾರ್ಯ ಕರೆ ಮಾಡಿದ ಸಂದರ್ಭ ಸಂತೋಷ್ ಫೋನ್ ಸ್ವಿಚ್ಡ್‌ಆಫ್ ಆಗಿತ್ತು. ಸುರೇಶ್ ತಮ್ಮ ಸ್ನೇಹಿತರೊಬ್ಬರನ್ನು ಅಣ್ಣನ ಮನೆಗೆ ಕಳುಹಿಸಿದ್ದು, ಈ ವೇಳೆ ಸಂತೋಷ್ ಆಚಾರ್ಯ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ.
ಸಂತೋಷ್ ಮಲಗಿದ್ದ ಸ್ಥಿತಿಯಲ್ಲಿದ್ದು, ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗರಕ್ಕೆ ಸಾಗಿಸಲಾಗಿದ್ದು, ಬಳಿಕ ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಮಂಗಳವಾರ ರಾತ್ರಿ ಮಲಗಿದಲ್ಲೇ ಹೃದಯಾಘಾತ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇವರು ತಾಯಿ, ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ಅಗಲಿದ್ದಾರೆ.