ವಿಜಯವಾಣಿ ಸುದ್ದಿಜಾಲ ಹಾವೇರಿ
ರಾಣೆಬೆನ್ನೂರ ಬಸ್ ತಂಗುದಾಣದಲ್ಲಿ ಶನಿವಾರ ಇಟ್ಟಿದ್ದ ಕರೊನಾ ಶಂಕಿತ ಮೃತ ವ್ಯಕ್ತಿಯ ಲ್ಯಾಬ್ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಎಸ್ಒಪಿ ಮಾರ್ಗಸೂಚಿಯ ಪ್ರಕಾರವೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅನಾರೋಗ್ಯದ ಕಾರಣಕ್ಕಾಗಿ ರಾಣೆಬೆನ್ನೂರ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಯ ತಪಾಸಣೆ ನಡೆಸಿ ಕಳಿಸಲಾಗಿತ್ತು. ಬಳಿಕ ಈತ ಬಸ್ ತಂಗುದಾಣದಲ್ಲಿ ನಿಂತಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಶವವನ್ನು ಸುರಕ್ಷಿತವಾಗಿ ಮುಚ್ಚಲಾಗಿತ್ತು. ಆಂಬುಲೆನ್ಸ್ಗಾಗಿ ಸಿಬ್ಬಂದಿ ಕಾಯುತ್ತಿದ್ದ ವೇಳೆ ತಂಗುದಾಣದಲ್ಲಿ ಶವ ಇರಿಸಲಾಗಿತ್ತು. ಇದನ್ನೇ ಕೆಲವರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಮೃತದೇಹವನ್ನು ಗೌರವಯುತವಾಗಿ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.