ಬೆಂಗಳೂರು: ರಷ್ಯಾ-ಯೂಕ್ರೇನ್ ಯುದ್ಧದಲ್ಲಿ ಸಾವಿಗೀಡಾದ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರ ಪಾರ್ಥಿವ ಶರೀರ, ಅವರು ಮೃತಪಟ್ಟ 20 ದಿನಗಳ ಬಳಿಕ ಮನೆಗೆ ಬರಲಿದೆ. ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಿರುವ ಕುರಿತು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮಾಹಿತಿ ನೀಡಿದ್ದಾರೆ.
ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ರಷ್ಯಾ ದಾಳಿ ಸಂದರ್ಭ ಯೂಕ್ರೇನ್ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಯುವಕ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಮಾ. 21ರ ಬೆಳಗಿನ ಜಾವ ಮೂರು ಗಂಟೆಗೆ ಬೆಂಗಳೂರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
21 ವರ್ಷದ ನವೀನ್ ಯೂಕ್ರೇನ್ನಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ಮಾ. 1ರಂದು ಯೂಕ್ರೇನ್ನ ಖಾರ್ಕಿವ್ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ತುತ್ತಾಗಿ ನವೀನ್ ಮೃತಪಟ್ಟಿದ್ದರು. ನಾನಾ ಕಾರಣಗಳಿಂದಾಗಿ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಆಗಿರಲಿಲ್ಲ.