ತಹಸೀಲ್ದಾರ್ ಎಸ್.ಎ.ಪ್ರಸಾದ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿರುವುದು 
ಜಿಲ್ಲೆ

ಪತ್ತೆಯಾಗದ ಕಾರ್ಮಿಕನ ಶವ: ಅಧಿಕಾರಿಗಳಿಂದ ಬಿರುಸಿನ ಕಾರ್ಯಾಚರಣೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹೆಬ್ರಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಚೀರೊಳ್ಳಿ ಎಂಬಲ್ಲಿ ತುಮಕೂರು ಜಿಲ್ಲೆಯ ತಿಪಟೂರು ಲಕ್ಷ್ಮಣನಗರದ ಕೃಷಿ ಕೂಲಿ ಕಾರ್ಮಿಕ ಆನಂದ್ ಗುರುವಾರ ಸಂಜೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಹೋಗಲು ದಾರಿಯೇ ಇಲ್ಲದೆ ಮರಗಿಡ ಪೊದೆಗಳನ್ನು ಕಡಿದು ಹೋಗಬೇಕಿದೆ. ಅಗ್ನಿಶಾಮಕ ದಳದವರು ಹೆಬ್ರಿ ಪೊಲೀಸರ ಸಹಕಾರದಲ್ಲಿ ಹುಡುಕಾಟ ನಡೆಸುತ್ತಿದ್ದು, ಮಳೆ ಅಡ್ಡಿಯಾಗಿದೆ. ನಾಡ್ಪಾಲಿನ ಉಗ್ರಾಣಿಬೆಟ್ಟು ಎಂಬಲ್ಲಿ ಮನೋರಮಾ ಹೆಗ್ಡೆ ಎಂಬುವರ ತೋಟದಲ್ಲಿ ಹಲವಾರು ಸಮಯಗಳಿಂದ ದುಡಿಯುತ್ತಿದ್ದ ಕೃಷಿ ಕೂಲಿ ಕಾರ್ಮಿಕ ಆನಂದ ಹಗ್ಗದ ಸಹಾಯದಿಂದ ಹೊಳೆ ದಾಟುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಈಶ್ವರ್ ಮಲ್ಪೆಯಿಂದ ಕಾರ್ಯಾಚರಣೆ

ಉಡುಪಿಯ ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆ ಶುಕ್ರವಾರ ಮಧ್ಯಾಹ್ನದಿಂದ ಸುಮಾರು ನಾಲ್ಕು ಕಿಲೋಮೀಟರ್‌ನಷ್ಟು ನದಿಯಲ್ಲಿ ಇಳಿದು ಇಲಾಖೆಯೊಂದಿಗೆ ಕಾರ್ಯಾಚರಣೆ ಮಾಡಿದ್ದಾರೆ.

ಬೀಡು ಬಿಟ್ಟ ಅಧಿಕಾರಿಗಳು

ಬೆಳಗ್ಗಿನಿಂದ ಸಂಜೆ ತನಕ ವಿಪರೀತ ಮಳೆ ಸುರಿಯುತ್ತಿದ್ದರೂ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳದಿಂದ ಕದಲಿಲ್ಲ. ಹೆಬ್ರಿ ಪಿಎಸ್‌ಐ ಮಹೇಶ್ ಟಿಎಂ ಹಾಗೂ ಅವರ ತಂಡ ಆಲ್ಬರ್ಟ್ ಮೊನಿಸ್ ಮತ್ತು ಸಿಬ್ಬಂದಿ ತಂಡದ ಕಾರ್ಯಾಚರಣೆಗೆ ಸಾರ್ವಜನಿಕರು ಶಹಬ್ಬಾಸ್ ಹೇಳಿದ್ದಾರೆ. ತಹಸೀಲ್ದಾರ್ ಎಸ್.ಎ.ಪ್ರಸಾದ್, ಇಒ ಶಶಿಧರ್ ಕೆ.ಜೆ., ಕಂದಾಯ ನಿರೀಕ್ಷಕ ಹಿತೇಶ್ ಯು.ಬಿ., ಗ್ರಾಮ ಲೆಕ್ಕಾಧಿಕಾರಿ ಗಣೇಶ್ ಕುಲಾಲ್ ಹಾಜರಿದ್ದರು.

ಸಹಾಯಕ ಕಮಿಷನರ್ ಭೇಟಿ

ನೀರಿನಲ್ಲಿ ಕೊಚ್ಚಿ ಹೋದ ಘಟನಾ ಸ್ಥಳಕ್ಕೆ ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಮ್ಮ ಎಲ್ಲ ತಂಡಗಳು ಬೆಳಗ್ಗಿನಿಂದ ಬಹಳಷ್ಟು ಕಷ್ಟ ಇದ್ದರೂ ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಮಸ್ಯೆ ಆಗುತ್ತಿದೆ. ಒಂದು ವೇಳೆ ಹೆಚ್ಚಿನ ಕಾರ್ಯಾಚರಣೆಗೆ ಅಗತ್ಯತೆ ಇದ್ದರೂ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.