ಜಿಲ್ಲೆ

ಚರಂಡಿಗೆ ಬಿದ್ದ ವೃದ್ಧನ ಶವ ಪತ್ತೆ

Mangaluru - Nishantha Narayana

ಪುತ್ತೂರು: ನಗರ ಸಭಾ ವ್ಯಾಪ್ತಿಯ ರೋಟರಿಪುರ ತೋಡಿನಲ್ಲಿ ಶುಕ್ರವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

ಕಸಬಾ ಗ್ರಾಮದ ಪಡ್ಡಾಯೂರು ನಿವಾಸಿ ನಂದ ಕುಮಾರ್ (೬೮) ಮೃತರು. ಗುರುವಾರ ಸಂಜೆ ಮಯೂರ ಟಾಕೀಸ್ ಸಮೀಪದ ಚರಂಡಿಗೆ ಬಿದ್ದಿದ್ದರು. ಇವರ ಮೃತದೇಹ ತೋಡಿನಲ್ಲಿ ಹರಿಯುವ ಮಳೆ ನೀರಿನಲ್ಲಿ ೩ ಕಿ.ಮೀ. ದೂರಕ್ಕೆ ಬಂತೇ ಎಂಬ ಅನುಮಾನ ಸ್ಥಳೀಯರನ್ನು ಕಾಡಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶುಕ್ರವಾರ ಬೆಳಗ್ಗೆ ತೋಡಿನಲ್ಲಿ ಬಿದ್ದಿದ್ದ ಮೃತದೇಹವನ್ನು ಗಮನಿಸಿದ ಸ್ಥಳೀಯರು, ಠಾಣೆಗೆ ಮಾಹಿತಿ ನೀಡಿದ್ದರು. ಅನುಮಾನದ ಮೇಲೆ ಮನೆಯವರನ್ನು ಕರೆಸಿದಾಗ ಅವರ ಗುರುತು ಪತ್ತೆಯಾಗಿತ್ತು. ಪುತ್ತೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ವಿವೇಕಾನಂದ ಕಾಲೇಜಿನ ನಿವೃತ್ತ ನೌಕರರಾಗಿದ್ದ ಅವರು, ಗುರುವಾರ ಸಂಜೆ ಮನೆಯಿಂದ ರಿಕ್ಷಾದಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದರು. ಸಂಘವೊಂದರಿಂದ ಪಡೆದುಕೊಂಡಿದ್ದ ೧,೪೩,೫೦೦ ರೂ.ವನ್ನು ಬೈಪಾಸ್ ರಸ್ತೆಯಲ್ಲಿರುವ ಸಹೋದರಿಗೆ ನೀಡುವ ಉದ್ದೇಶದಿಂದ ಪೇಟೆಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ರಿಕ್ಷಾದಲ್ಲಿ ಸಂಚಾರಿ ಠಾಣೆಯ ಸಮೀಪದ ಅಂಗಡಿಯೊಂದಕ್ಕೆ ಬಂದಿದ್ದ ಅವರು, ಅಲ್ಲಿಂದ ಸುಶ್ರುತ ಆಸ್ಪತ್ರೆಯ ಸಮೀಪಕ್ಕೆ ನಡೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ರಸ್ತೆಗೆ ಬಿದ್ದ ಹಣ ಏನಾಯಿತು?

ಡಿ.೫ರಂದು ಸಂಜೆ ೪.೩೦ರ ಆಸುಪಾಸಿನಲ್ಲಿ ರಸ್ತೆ ಬದಿಯ ಚರಂಡಿಗೆ ಅವರು ಬೀಳುವ ದೃಶ್ಯ ಪಕ್ಕದ ಬ್ಯಾಂಕಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೈಯಲ್ಲಿದ್ದ ಚೀಲದಿಂದ ಒಂದು ಕಟ್ಟು ರಸ್ತೆಗೆ ಬಿದ್ದಿರುವುದನ್ನು ಪೊಲೀಸ್ ಮೂಲಗಳು ದೃಢಪಡಿಸಿವೆ. ಆದರೆ ಬಳಿಕ ಕಟ್ಟು ಏನಾಯಿತು ಎಂಬ ಮಾಹಿತಿ ಇಲ್ಲ.