ಲಕ್ಷ್ಮೇಶ್ವರ: ಪಟ್ಟಣದಲ್ಲಿ 23 ವರ್ಷಗಳ ಹಿಂದೆಯೇ ಸರ್ಕಾರಿ ಪಿಯು ಕಾಲೇಜ್ ಪ್ರಾರಂಭವಾದರೂ ಕಲಾ ವಿಭಾಗ ಇಲ್ಲದಿರುವ ಬಗ್ಗೆ ಗುರುವಾರ ‘ವಿಜಯವಾಣಿ’ ಪ್ರಕಟಿಸಿದ ‘ಲಕ್ಷ್ಮೇಶ್ವರದಲ್ಲಿ ಕಲಾ ವಿಭಾಗಕ್ಕೆ ಕಗ್ಗಂಟು’ ವಿಶೇಷ ವರದಿಗೆ ಶಿಕ್ಷಣ ಇಲಾಖೆ ಸ್ಪಂದಿಸಿದ್ದು, ಕಲಾ ವಿಭಾಗಕ್ಕೆ ಪ್ರವೇಶ ನೀಡಲು ಡಿಡಿಪಿಯು ಕರಿಸಿದ್ದಪ್ಪ ನಿರ್ದೇಶನ ನೀಡಿದ್ದಾರೆ.
ಪಟ್ಟಣದಲ್ಲಿ ಸರ್ಕಾರಿ ಪಿಯು ಕಾಲೇಜ್ ಇದ್ದರೂ ಕಲಾ ವಿಭಾಗ ಇರಲಿಲ್ಲ. ಕಲಾ ವಿಭಾಗದಲ್ಲಿ ಓದುವ ವಿದ್ಯಾರ್ಥಿಗಳು ದುಬಾರಿ ಶುಲ್ಕ ಪಾವತಿಸಿ ಖಾಸಗಿ ಕಾಲೇಜ್, ಇಲ್ಲವೇ ನೆರೆಯ ತಾಲೂಕುಗಳಿಗೆ ತೆರಳಬೇಕಿತ್ತು. ಕಾಲೇಜು ಪ್ರಾರಂಭವಾಗಿ 2 ದಶಕ ಕಳೆದರೂ ಮತ್ತು ಕಲಾ ವಿಭಾಗಕ್ಕೆ ಅನುಮತಿ ಇದ್ದರೂ ಏಕೆ ತರಗತಿ ಆರಂಭಿಸಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಲಾ ವಿಭಾಗ ಪ್ರಾರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದವು.
‘ವಿಜಯವಾಣಿ’ ಓದಿ ಕರೆ ಮಾಡಿದ ಡಿಡಿಪಿಯು ಕರಿಸಿದ್ದಪ್ಪ, ‘ತಾವು 2 ತಿಂಗಳ ಹಿಂದೆಯಷ್ಟೇ ವರ್ಗಾವಣೆಯಾಗಿ ಬಂದಿದ್ದು, ಲಕ್ಷ್ಮೇಶ್ವರದಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಾ ವಿಭಾಗ ಇಲ್ಲದಿರುವ ವಿಷಯ ಈ ವರದಿಯಿಂದ ಗೊತ್ತಾಗಿದೆ. ಇಷ್ಟು ವರ್ಷವಾದರೂ ಏಕೆ ಕಲಾ ವಿಭಾಗ ಪ್ರಾರಂಭಿಸಿಲ್ಲ?. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಥಮ ಪಿಯುಸಿಗೆ ಪ್ರವೇಶ ಪ್ರಾರಂಭಿಸಿ, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಪ್ರಾಚಾರ್ಯರಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.
ಪೂರಕ ಸಿಬ್ಬಂದಿ, ಅಗತ್ಯ ಸೌಲಭ್ಯವನ್ನು ಇಲಾಖೆಯಿಂದ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಾಲೇಜಿನಲ್ಲಿ ಶುಕ್ರವಾರದಿಂದಲೇ ವಿಜ್ಞಾನ, ವಾಣಿಜ್ಯ ವಿಭಾಗದ ಜತೆಗೆ ಕಲಾ ವಿಭಾಗದ ಅರ್ಜಿಗಳನ್ನು ವಿತರಿಸಲು ಪ್ರಾರಂಭಿಸಲಾಗಿದೆ.
ಈ ಕುರಿತು ಪ್ರಾಚಾರ್ಯ ಕುಬೇರಪ್ಪ ಸಿದ್ರಾಮಣ್ಣವರ ಪ್ರತಿಕ್ರಿಯಿಸಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಿಯು ಕಲಾ ವಿಭಾಗಕ್ಕೆ ಪ್ರವೇಶ ನೀಡಲಾಗುವುದು. ಶುಕ್ರವಾರದಿಂದ ಪ್ರವೇಶ ಅರ್ಜಿ ನೀಡಲಾಗುತ್ತಿದೆ. ಕಾಲೇಜಿನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಸಾಕಷ್ಟಿದೆ. ಪೂರ್ಣ ಪ್ರಮಾಣದ ಸಿಬ್ಬಂದಿ ಕಲ್ಪಿಸಿದರೆ ಅನುಕೂಲ’ ಎಂದು ಹೇಳಿದರು.