ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಪೊಲೀಸ್ ಭದ್ರತೆ ಒದಗಿಸಿರುವುದು. 
ಜಿಲ್ಲೆ

ಅಧಿಕಾರಕ್ಕಾಗಿ ಡಿಡಿಪಿಐಗಳ ಜಟಾಪಟಿ..!

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಹುದ್ದೆ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಜಟಾಪಟಿ ನಡೆಸಿರುವ ಘಟನೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ.

ಪ್ರಸ್ತಕ ಡಿಡಿಪಿಐ ಆಗಿರುವ ಉಮೇಶ ಶಿರಹಟ್ಟಿಮಠ ಅವರಿಗೆ ಮುಂಬಡ್ತಿ ನೀಡಿ ಜಂಟಿ ನಿರ್ದೇಶಕರಾಗಿ ಬರುವ 30ರಂದು ನಿಯುಕ್ತಿಗೊಳ್ಳಲಿದ್ದಾರೆ. ಆದರೆ ಇನ್ನೂ ಸಮಯ ಅವಕಾಶ ಇರುವ ಬೆನ್ನಲ್ಲಿಯೇ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಬಿಇಒ ಆಗಿದ್ದ ಯುವರಾಜ್ ನಾಯಕ ಅವರನ್ನು ವಿಜಯಪುರ ಡಿಡಿಪಿಐ ಆಗಿ ವರ್ಗಾವಣೆ ಮಾಡಲಾಗಿದೆ.

ಇಂದು ಡಿಡಿಪಿಐ ಆಗಿ ಅಧಿಕಾರ ಸ್ವೀಕರಿಸಲು ಬಂದಿದ್ದ ಯುವರಾಜ ನಾಯಕ ಅವರಿಗೆ ಚಾರ್ಚ್ ನೀಡಲು ಪ್ರಸ್ತಕ ಡಿಡಿಪಿಐ ಉಮೇಶ ಶಿರಹಟ್ಟಿಮಠ ನಿರಾಕರಿಸಿ, ತಮ್ಮ ಅವಧಿ ಇನ್ನೂ ಜೂನ್ 30ರವರೆಗೆ ಇದ್ದು ತಾವು ಈಗಲೇ ಅಧಿಕಾರ ಹಸ್ತಾಂತರ ಮಾಡುವುದಿಲ್ಲ. 30ರ ನಂತರ ಸರ್ಕಾರದ ಆದೇಶದಂತೆ ತಾವು ಬೆಂಗಳೂರಿನ ಜಂಟಿ ನಿರ್ದೇಶಕರಾಗಿ ನಿಯುಕ್ತಿ ಹೊಂದಲಿದ್ದು, ಅಧಿಕಾರ ಹಸ್ತಾಂತರ ಮಾಡುವುದಾಗಿ ಉಮೇಶ ಶಿರಹಟ್ಟಿಮಠ ಸ್ಪಷ್ಟಪಡಿಸಿದರು.

ಇದರಿಂದ ಕೆಲ ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸುಮಾರು ಗಂಟೆಗಳವರೆಗೆ ಇಬ್ಬರು ಅಧಿಕಾರಿಗಳ ಮಧ್ಯೆ ವಾದ- ವಿವಾದಗಳು ನಡೆಯಿತು. ಸರ್ಕಾರ ತಮ್ಮನ್ನು ವಿಜಯಪುರ ಡಿಡಿಪಿಐಗೆ ಮುಂಬಡ್ತಿ ನೀಡಿ ಆದೇಶಿಸಿದೆ. ಹೀಗಾಗಿ ನೀವು ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಯುವರಾಜ್ ನಾಯಕ ಪಟ್ಟು ಹಿಡಿದಿದ್ದರು.

ವಿಷಯ ತಿಳಿದ ಪೊಲೀಸರು ಮಧ್ಯೆ ಪ್ರವೇಶಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಗೆ ಭದ್ರತೆ ಒದಗಿಸಿದರಲ್ಲದೇ, ಇಬ್ಬರು ಅಧಿಕಾರಿಗಳ ಮಧ್ಯೆ ಸಂಧಾನ ಮಾಡಲು ಪ್ರಯತ್ನಿಸಿದರು. ಅಂತಿಮವಾಗಿ ಅಧಿಕಾರಿ ಯುವರಾಜ ನಾಯಕ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಕ್ಕೆ ತೆರಳಿದರು.

ಸರ್ಕಾರದ ಗೊಂದಲದ ಆದೇಶ

ಸದ್ಯ ಇರುವ ಡಿಡಿಪಿಐ ಉಮೇಶ ಶಿರಹಟ್ಟಿಮಠ ಅವರನ್ನು ಬೆಂಗಳೂರಿನ ಜಂಟಿ ನಿರ್ದೇಶಕರಾಗಿ ಆದೇಶ ಹೊರಡಿಸಿದ್ದು, ಅದರಲ್ಲಿ ಜೂನ್ 30ರಂದು ಅಧಿಕಾರ ಸ್ವೀಕರಿಸುವಂತೆ ಸೂಚಿಸಿದೆ. ಇತ್ತ ಕೂಡ್ಲಿಗಿ ಬಿಇಒ ಆಗಿದ್ದ ಯುವರಾಜ್ ನಾಯಕ ಅವರಿಗೆ ವಿಜಯಪುರ ಡಿಡಿಪಿಐ ಆಗಿ ತಕ್ಷಣ ಅಧಿಕಾರ ಸ್ವೀಕರಿಸುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಗೊಂದಲದಿಂದ ಡಿಡಿಪಿಐ ಕಚೇರಿಯಲ್ಲಿ ಕುರ್ಚಿಗಾಗಿ ಗುದ್ದಾಟ ನಡೆಸಬೇಕಾದ ಪ್ರಸಂಗ ನಡೆದಿದೆ.

ತಮಗೆ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾಗಿ ಸರ್ಕಾರ ನಿಯುಕ್ತಗೊಳಿಸಿದೆ. ಜೂನ್ 30ರವರೆಗೆ ಕಾಲಾವಕಾಶ ಇದೆ. ಅಷ್ಟರೊಳಗಾಗಿ ಕೂಡ್ಲಿಗಿ ಬಿಇಒ ಆಗಿದ್ದ ಯುವರಾಜ ನಾಯಕ ಅವರನ್ನು ಮುಂಬಡ್ತಿ ನೀಡಿ ವಿಜಯಪುರ ಡಿಡಿಪಿಐ ಕಚೇರಿಗೆ ವರ್ಗಾಯಿಸಲಾಗಿದೆ. ಇಂದು ಅವರು ಅಧಿಕಾರ ಸ್ವೀಕರಿಸಲು ಬಂದಿದ್ದರು. ಅವರ ಜತೆ ಮಾತನಾಡಿದ್ದೇನೆ. ಅವರು ಸಮಾಧಾನವಾಗಿ ಹೋಗಿದ್ದಾರೆ. ಮುಂದೆ ಸರ್ಕಾರ ನಿರ್ಧಾರ ಮಾಡಬೇಕಾಗಿದೆ.ಉಮೇಶ ಶಿರಹಟ್ಟಿಮಠ, ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
ಇಂದು ವಿಜಯಪುರ ಡಿಡಿಪಿಐ ಆಗಿ ಅಧಿಕಾರ ಸ್ವೀಕರಿಸಲು ಸರ್ಕಾರದ ಆದೇಶದಂತೆ ಡಿಡಿಪಿಐ ಕಚೇರಿಗೆ ಆಗಮಿಸಿದ್ದೆ. ಆದರೆ ಸದ್ಯ ಇರುವ ಡಿಡಿಪಿಐ ಅವರಿಗೆ ಜೂನ್ 30ರವರೆಗೆ ಕಾಲಾವಕಾಶದಿದೆ. ಹೀಗಾಗಿ ಅಧಿಕಾರ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು. ತಾವು ಸರ್ಕಾರಕ್ಕೆ ಈ ಮಾಹಿತಿ ವರದಿ ನೀಡುತ್ತೇನೆ. ಅವರು ನೀಡುವ ಆದೇಶದಂತೆ ನಡೆದುಕೊಳ್ಳುತ್ತೇನೆ.ಯುವರಾಜ ನಾಯಕ, ಡಿಡಿಪಿಐ ಮುಂಬಡ್ತಿ ಪಡೆದ ಅಧಿಕಾರಿ