ಜಿಲ್ಲೆ

ವಿದ್ಯಾರ್ಥಿಗಳು ಓದಲು ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗದಿರಲಿ: ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡಗೆ ಡಿಡಿಪಿಐ ಮನವಿ

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಅಧ್ಯಕ್ಷರೂ ಆದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್ .ಕೆ. ಪಾಂಡು ಸಮ್ಮುಖದಲ್ಲಿ ಜಿಲ್ಲಾ ಗುರುಭವನದ ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಮನವಿ ಸಲ್ಲಿಸಲಾಯಿತು.
ವಿದ್ಯುತ್ ಏರಿಳಿತದಿಂದ ಹಲವು ಸಮಸ್ಯೆಗಳಾಗುತ್ತಿದ್ದು ಅದನ್ನು ಸರಿಪಡಿಸಲು ಹೆಚ್ಚುವರಿಯಾಗಿ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಡುವಂತೆ ಕೋರಲಾಯಿತು. ಅಲ್ಲದೆ ಪರೀಕ್ಷಾ ಸಮಯವಾಗಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು, ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳ ಮೇಲೆ ಅಳವಡಿಸಿರುವ ಸೋಲಾರ್ ಪ್ಯಾನಲ್‌ಗಳು ಕೆಟ್ಟು ಹೋಗಿದ್ದು, ಅದನ್ನು ದುರಸ್ತಿಗೊಳಿಸುವಂತೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆ ಆಯೋಜಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಲ್ಲದೆ, ಈ ಬಗ್ಗೆ ಪರಿಶೀಲಿಸಿ ಕೈಗೊಂಡ ವರದಿಯನ್ನು ನೀಡುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರೇವಣ್ಣ, ಉಪಾಧ್ಯಕ್ಷ ಮಾಲಂಗಿ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮೇಗೌಡ, ಖಜಾಂಚಿ ಮಹದೇವ್, ಸಂಘಟನಾ ಕಾರ್ಯದರ್ಶಿ ಶಾಂತರಾಜು, ಎಪಿಸಿ ಸುರೇಶ್, ಜಿಲ್ಲಾ ಉಪ ನಿರ್ದೇಶಕರ ಕಚೇರಿ ಅಧೀಕ್ಷಕ ಗಣೇಶ್, ಕೆಂಪೇಗೌಡ , ಪರಮೇಶ್, ಉಪ ನಿರ್ದೇಶಕರ ಆಪ್ತ ಸಹಾಯಕ ಮಂಜುನಾಥ್ ಇತರರು ಇದ್ದರು.