ಜಿಲ್ಲೆ

ವಾಣಿಜ್ಯ ಮಳಿಗೆ ಹರಾಜಿಗೆ ಕ್ರಮ

ಎ. ಆರ್. ರಘುರಾಮ

ಅರಕಲಗೂಡು : ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ 128 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸತ್ಯಭಾಮಾ ತಿಳಿಸಿದರು. ಪಟ್ಟಣಕ್ಕೆ ಶನಿವಾರ ಭೇಟಿ ನೀಡಿ, ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಟ್ಟಣದ ಅನಕೃ ವೃತ್ತ, ಪೇಟೆ ಮುಖ್ಯ ರಸ್ತೆ, ಕೆಇಬಿ ರಸ್ತೆ, ಸಂತೆಮಾಳ ರಸ್ತೆ ಹಾಗೂ ಹೊಳೇನರಸೀಪುರ ರಸ್ತೆಗಳಲ್ಲಿರುವ 128 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜಿಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲಿ ಹರಾಜಿನ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದರು. 128 ಮಳಿಗೆಗಳು ಸರ್ಕಾರಿ ಜಾಗದಲ್ಲೇ ಇರುವ ಕಾರಣಣಿವುಗಳ ಸಂಪೂರ್ಣ ಒಡೆತನ ಪ.ಪಂ.ಗೇ ಸೇರಿದೆ. ಆದ್ದರಿಂದ ಯಾವುದೇ ಗೊಂದಲ ಬೇಡ ಎಂದ ಅವರು ನಿಯಮದಂತೆ 12 ವರ್ಷಕೊಮ್ಮೆ ಬಹಿರಂಗ ಹರಾಜು ಪ್ರಕ್ರಿಯ ನಡೆಯಬೇಕು. ಅದರಂತೆ 2024ರಲ್ಲಿ ಪ.ಪಂ.ನ ಎಲ್ಲಾ ಮಳಿಗೆಗಳ ಬಹಿರಂಗ ಹರಾಜಿಗೆ ಕ್ರಮ ವಹಿಸುವಂತೆ ಪಪಂ ಮುಖ್ಯಾಧಿಕಾರಿ ಬಸವರಾಜ ಠಾಕಪ್ಪಗೆ ಸೂಚನೆ ನೀಡಿದರು. ತಹಸೀಲ್ದಾರ್ ಬಡವರೆಡ್ಡಪ್ಪ ರೋಣದ ಇತರರು ಇದ್ದರು.

=======