ಜಿಲ್ಲೆ

ಡಿಸಿಪಿ ವರ್ಗಾವಣೆ ಮ್ಯೂಸಿಕಲ್ ಚೇರ್!

kumarvrl

ಬೆಂಗಳೂರು: ಐಪಿಎಸ್ ಅಧಿಕಾರಿ ಇಶಾ ಪಂತ್ ವರ್ಗಾವಣೆ ಆದೇಶ ಸಂಗೀತ ಕುರ್ಚಿಯಂತಾಗಿದೆ. ಕೇವಲ ನಾಲ್ಕು ತಾಸಿನಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಹುದ್ದೆಯಿಂದ ವರ್ಗಾವಣೆ ವಿಚಾರವಾಗಿ 3 ಬಾರಿ ಸರ್ಕಾರ ಆದೇಶ ಬದಲಾಯಿಸಿದೆ. ಆಗ್ನೇಯ ವಿಭಾಗದಲ್ಲಿ ಇಶಾ ಪಂತ್ 1 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, 2 ದಿನಗಳ ಹಿಂದೆ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತೆರವಾದ ಸ್ಥಾನಕ್ಕೆ ಜೋಶಿ ಶ್ರೀನಾಥ್ ಮಹದೇವ್​ರನ್ನು ಸರ್ಕಾರ ನಿಯೋಜಿಸಿತು.

ಶನಿವಾರ ಬೆಳಗ್ಗೆ 11 ಗಂಟೆಗೆ ಇಶಾ ಪಂತ್ ವರ್ಗಾವಣೆ ಆದೇಶ ದಿಢೀರ್ ಹಿಂಪಡೆದ ಸರ್ಕಾರ, ಮಧ್ಯಾಹ್ನ 12 ಗಂಟೆಗೆ ಆಗ್ನೇಯ ವಿಭಾಗಕ್ಕೆ ಮರು ನಿಯೋಜಿಸಿ ಆದೇಶಿಸಿತು. ನಂತರ 2 ಗಂಟೆಯಲ್ಲೇ ಹಠಾತ್ತಾಗಿ ಸರ್ಕಾರ ಮಟ್ಟದಲ್ಲಿ ಬೆಳವಣಿಗೆಗಳು ನಡೆದು ಮಧ್ಯಾಹ್ನ 3 ಗಂಟೆಗೆ ಮತ್ತೆ ಇಶಾ ಪಂತ್​ರನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯ ಕಮಾಡೆಂಟ್ ಸೆಂಟರ್ ಡಿಸಿಪಿ ಹುದ್ದೆಗೆ ವರ್ಗಾಯಿಸಿ ಮತ್ತೊಂದು ಆದೇಶ ಹೊರಡಿಸಿತು. ಇಶಾ ಪಂತ್ ಜಾಗಕ್ಕೆ ಮೊದಲಿನಂತೆ ಜೋಶಿ ಮಹದೇವ್​ಗೆ ನಿಯುಕ್ತಿಗೊಂಡಿದ್ದು, ಕಮಾಡೆಂಟ್ ಸೆಂಟರ್ ಡಿಸಿಪಿ ಆಗಿದ್ದ ಜಿನೇಂದ್ರ ಕಣಗಾವಿಗೆ ಆಂತರಿಕ ಭದ್ರತಾ ವಿಭಾಗದ ಎಸ್​ಪಿ ಹುದ್ದೆಯನ್ನು ಸರ್ಕಾರ ನೀಡಿದೆ.