ಜಿಲ್ಲೆ

ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಡಿಸಿಎಂ ಶಂಕು

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣದಲ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್

ಚನ್ನಪಟ್ಟಣ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಇಡೀ ದಿನ ತಾಲೂಕು ಪ್ರವಾಸ ಕೈಗೊಂಡು, ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ತಾಲೂಕಿನ ಮಾಕಳಿ ಗ್ರಾಪಂನಿಂದ ಆರಂಭಗೊಂಡ ಪ್ರವಾಸ, ನಾಗವಾರ, ಕೆಲಗೆರೆ, ಬೇವೂರು, ಎಂ.ಬಿ.ಹಳ್ಳಿ, ಎಚ್.ಬ್ಯಾಡರಹಳ್ಳಿ, ಹುಲುವಾಡಿ, ಮುದಗೆರೆ, ಮತ್ತೀಕೆರೆ, ಸಂಕಲಗೆರೆ, ದೊಡ್ಡಮಳೂರು, ಹೊಟ್ಟಿಗಾನಹೊಸಹಳ್ಳಿ, ವಾಲೆತೋಪು, ಕೂಡ್ಲೂರು, ಮಳೂರುಪಟ್ಟ, ಚಕ್ಕೆರೆ, ಚಕ್ಕಲೂರು, ಸುಳ್ಳೇರಿ, ಹುಣಸನಹಳ್ಳಿ, ಕೋಡಂಬಳ್ಳಿ, ಕಾಡಂಕನಹಳ್ಳಿ ಹಾಗೂ ನೆಲಮಾಕನಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಪ್ರವಾಸಕ್ಕೂ ಮುನ್ನ ಚನ್ನಪಟ್ಟಣ ಉಪನೋಂದಣಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಡಿಕೆಶಿ, ನೂತನ ಕಚೇರಿ ಪರಿಶೀಲನೆ ನಡೆಸಿದರು. ನಂತರ, ಮಾಕಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಮಾಕಳಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಆರ್‌ಇ ಮತ್ತು ಇಲಾಖೆಯ ವಿಶೇಷ ಅನುದಾನದಡಿ ಸಿ.ಸಿ. ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಹಾಗೂ ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆಯ ಅನುದಾನದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದರು. ನಾಗವಾರದಲ್ಲಿ ಟೊಯೋಟಾ ಫೈನಾನ್ಸಿಯಲ್ ಸರ್ವೀಸ್ ಆ್ ಇಂಡಿಯಾ ಸಂಸ್ಥೆ ಸಿಎಸ್‌ಆರ್ ಅನುದಾನದಡಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಶಾಲೆಯ ವಿದ್ಯಾರ್ಥಿಗಳಿಂದ ಡಿಸಿಎಂ ಉದ್ಘಾಟನೆ ಮಾಡಿಸಿದರು. ನಂತರ, ರೂ.2.80 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರ ಮೂಲಕ ಚಾಲನೆ ನೀಡಿಸಿದರು. ಇವುಗಳಲ್ಲದೇ ಹಲವಾರು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಡಿಕೆಶಿ ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಡಾ. ರಂಗನಾಥ್, ಬಿಎಂಐಸಿಎಪಿಎ ಪ್ರಾಧಿಕಾರದ ಅಧ್ಯಕ್ಷ ರಘುನಂದನ್ ರಾಮಣ್ಣ, ಮಾಜಿ ಶಾಸಕರಾದ ಎಂ.ಸಿ.ಅಶ್ವತ್ಥ, ಕೆ.ರಾಜು, ಕಾಂಗ್ರೆಸ್ ಮುಖಂಡರಾದ ದುಂತೂರು ವಿಶ್ವನಾಥ್, ಎಸ್.ಆರ್.ಪ್ರಮೋದ್, ಎಂ.ಎ.ಕರುಣ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕಾರ್, ಸಿಇಒ ದಿಗ್ವಿಜಯ್ ಬೋಡಕೆ, ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ನಮ್ಮದು ಅಭಿವೃದ್ಧಿಯ ಚಿಂತನೆ!
ತಾಲೂಕಿನ ಹುಲುವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾವು ಉಪಚುನಾವಣೆ ಅಭ್ಯರ್ಥಿ ಬಗ್ಗೆ ಯೋಚನೆ ಮಾಡುತ್ತಿಲ್ಲ. ತಾಲೂಕಿನ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ತಾಲೂಕಿಗೆ 5 ಸಾವಿರ ಮನೆ ಹಾಗೂ ಪ್ರತಿ ಪಂಚಾಯಿತಿಗೆ 2-6 ಕೋಟಿ ರೂ. ಅನುದಾನ ತಂದಿದ್ದೇವೆ. ಮುಂಬರುವ ಉಪಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದು ಕೆಲಸ ಮಾಡಲು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.

ಎಲ್ಲರಿಗೂ ನ್ಯಾಯ
ಜಾತಿಗಣತಿ ಜಾರಿ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ವಿರೋಧದ ವಿಚಾರಕ್ಕೆ ಧ್ವನಿಗೂಡಿಸಿದ ಡಿಸಿಎಂ, ನಮ್ಮ ಪಾರ್ಟಿಯಲ್ಲಿ ಒಂದು ಪಾಲಿಸಿ ಇದೆ. ಎಲ್ಲರಿಗೂ ನ್ಯಾಯ ಒದಗಿಸಲಾಗುವುದು. ಈ ವಿಚಾರವಾಗಿ ನಾನು ಹಾಗೂ ಸಿದ್ದರಾಮಯ್ಯ ಅವರು, ಮತ್ತೆ ಕೆಲವರು ಕುಳಿತು ಮಾತನಾಡುತ್ತೇವೆ. ಇದರಲ್ಲಿ ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎ್ಐಆರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಎ್ಐಆರ್ ಅವರ ಖಾಸಗಿ ವಿಚಾರ. ಅದರಲ್ಲಿ ಬಾಯಿಹಾಕಲು ನನಗೆ ಇಷ್ಟವಿಲ್ಲ ಎಂದರು.

ಭಾಷಣ ಮಾಡಲು ಬಂದಿಲ್ಲ!
ತಾಲೂಕಿನ ಮಾಕಳಿ ಗ್ರಾಮದಲ್ಲಿ ಮಾತನಾಡಿದ ಡಿಕೆಶಿ, ನಾನು ಇಲ್ಲಿ ಭಾಷಣ ಮಾಡೋಕೆ ಬಂದಿಲ್ಲ. ಕ್ಷೇತ್ರವನ್ನು ಅಭಿವೃದ್ಧಿ ಮಾಡಲು 300 ಕೋಟಿ ರೂ. ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿ ಎಂಎಲ್ಎ ಖಾಲಿ ಆದಮೇಲೆ ನಾನು, ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಇಪ್ಪತ್ತು ಸಲ ಬಂದು ನಿಮ್ಮ ಕಷ್ಟ-ಸುಖ ಕೇಳಿದ್ದೇವೆ. ನಮ್ಮ ರೀತಿ ನಿಮ್ಮ ಹಳೇ ಎಂಎಲ್ಎ ಬಂದಿದ್ರಾ ಎಂದು ಪ್ರಶ್ನಿಸಿದರು.
ನೀವು ಸಾಕಷ್ಟು ಅರ್ಜಿ ಕೊಟ್ಟಿದ್ದೀರಿ. ನಿಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ಬಗೆಹರಿಸುತ್ತೇನೆ ಎಂದರು.

ನಾನು ಉಸ್ತುವಾರಿಯಲ್ಲ, ಕಾರ್ಯಕರ್ತ!
ಕುಣಿಗಲ್ ಶಾಸಕ ರಂಗನಾಥ್ ಮಾತನಾಡಿ, ಈ ಕ್ಷೇತ್ರದಲ್ಲಿ ನಾನೊಬ್ಬ ಉಸ್ತುವಾರಿ ಅನ್ನೋದಕ್ಕಿಂತ ಕಾಂಗ್ರೆಸ್ ಕಾರ್ಯಕರ್ತ ಎಂದು ಕೆಲಸ ಮಾಡುತ್ತಿದ್ದೇನೆ. ಬೇವೂರು ಜಿಪಂ ಚುನಾವಣಾ ಜವಾಬ್ದಾರಿ ನನ್ನ ಮೇಲಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಚನ್ನಪಟ್ಟಣಕ್ಕೆ ಇಷ್ಟು ಅನುದಾನ ಯಾರೂ ತಂದಿರಲಿಲ್ಲ. ಆದರೆ ಡಿಸಿಎಂ ಹಾಗೂ ಡಿಕೆ ಸುರೇಶ್ ಅವರು 500 ಕೋಟಿಗೂ ಅಧಿಕ ಅನುದಾನ ತರುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಈ ಇಬ್ಬರ ಕೈ ಬಲಪಡಿಸುವ ಮಹತ್ತರ ಜವಾಬ್ದಾರಿ ಮತದಾರರ ಮೇಲಿದೆ ಎಂದರು.

ಡಿಕೆಸು ಅಡ್ಮಿನಿಸ್ಟ್ರೇಷನ್ ಎಲ್ರಿಗೂ ಗೊತ್ತು!
ಚನ್ನಪಟ್ಟಣದಲ್ಲಿ ಡಿಕೆ ಸುರೇಶ್ ಸ್ಪರ್ಧೆಗೆ ಒತ್ತಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ರಂಗನಾಥ್, ಚನ್ನಪಟ್ಟಣಕ್ಕೆ ಡಿ.ಕೆ. ಸುರೇಶ್ ಅವರಂತಹ ಸ್ಟ್ರಾಂಗ್ ಕ್ಯಾಂಡಿಡೇಟ್ ಬೇಕು ಎಂದು ಇಲ್ಲಿನ ಜನತೆ ಬಯಸುತ್ತಿದ್ದಾರೆ. ಡಿ.ಕೆ. ಸುರೇಶ್ ಅವರ ಅಡ್ಮಿನಿಸ್ಟ್ರೇಷನ್ ಹಾಗೂ ಅವರ ಕಾರ್ಯತಂತ್ರ ಏನು ಅಂತಾ ಜನರಿಗೆ ಗೊತ್ತಿದೆ. ಜನತೆ ಅವರನ್ನು ಅಪೇಕ್ಷೆಪಡುವುದು ಸಹಜ. ಈಗಾಗಲೇ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಚನ್ನಪಟ್ಟಣ ಯಾವ ರೀತಿ ಅಭಿವೃದ್ಧಿ ಆಗ್ತಿದೆ ಅನ್ನೋದು ಗೊತ್ತಾಗಿದೆ. ಪಕ್ಷ ಹಾಗೂ ಕ್ಷೇತ್ರದ ಜನ ಯಾರನ್ನು ಬಯಸುತ್ತಿದ್ದಾರೋ ಅವರು ಅಭ್ಯರ್ಥಿ ಆಗುತ್ತಾರೆ ಎನ್ನುವ ಮೂಲಕ ಅಭ್ಯರ್ಥಿ ಆಯ್ಕೆ ಬಗ್ಗೆ ಅಚ್ಚರಿ ಮೂಡಿಸಿದರು.

ಅಭಿವೃದ್ಧಿಗೂ ಚುನಾವಣೆಗೂ ಸಂಬಂಧವಿಲ್ಲ
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬೈ ಎಲೆಕ್ಷನ್‌ಗೂ ಅಭಿವೃದ್ಧಿ ಕಾಮಗಾರಿಗಳಿಗೂ ಯಾವುದೇ ಸಂಬಂಧವಿಲ್ಲ. ಮಾಜಿ ಸಂಸದ ಡಿ.ಕೆ.ಸುರೇಶ್ ಕಳೆದ 11 ವರ್ಷದಲ್ಲಿ ಸಾಕಷ್ಟು ಅನುದಾನ ತಂದಿದ್ದರು. ನಾನು ಹಾಗೂ ಡಿಸಿಎಂ ಕ್ಷೇತ್ರದಲ್ಲಿ ಸಭೆ ಮಾಡಿದಾಗ ಇಲ್ಲಿನ ಜನರು ಸಾಕಷ್ಟು ಸಮಸ್ಯೆ ಹೇಳಿಕೊಂಡಿದ್ದರು. ಸಮಸ್ಯೆ ಆಲಿಸಿ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದೇವೆ. ಅನುದಾನ ಬಿಡುಗಡೆಯಾಗಿದ್ದು, ಕೆಲಸ ಕೂಡ ಶೀಘ್ರವಾಗಿ ಪ್ರಾರಂಭವಾಗತ್ತದೆ ಎಂದರು.

ಜಿಟಿಡಿ ಹೇಳಿದ್ದು ಸರಿ!
ಎಚ್‌ಡಿಕೆ ವಿರುದ್ಧ ಎ್ಐಆರ್ ದಾಖಲು ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಅಧ್ಯಕ್ಷರು. ದೂರು ಕೊಟ್ಟಿರೋದೂ ಅವರದ್ದೇ ಪಕ್ಷದ ಉಪಾಧ್ಯಕ್ಷರು. ಅದನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದರು.
ಸಿಎಂ ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು, ಎ್ಐಆರ್ ಆದ ತಕ್ಷಣ ರಾಜೀನಾಮೆ ಕೊಡಬೇಕೆಂದು ಬಿಜೆಪಿ ಅವರು ಹೇಳುತ್ತಾರೆ. ಕುಮಾರಸ್ವಾಮಿ ರಾಜೀನಾಮೆ ಕೇಳಿಲ್ಲ ಎಂದೂ ಹೇಳುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವುದಾದರೆ, ಕೇಂದ್ರದ ಮಂತ್ರಿ, ಮಾಜಿ ಸಚಿವರು, ಶಾಸಕರು ರಾಜೀನಾಮೆ ಕೊಡಬೇಕಾಗುತ್ತದೆ ಎಂದಿದ್ದಾರೆ. ನ್ಯಾಯಯುತವಾಗಿ ಜಿ.ಟಿ.ದೇವೇಗೌಡರು ಹೇಳಿರೋದು ಸರಿ ಇದೆ ಎಂದರು.