savadi 
ಜಿಲ್ಲೆ

ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ ಎಂದ ಡಿಸಿಎಂ ಲಕ್ಷ್ಮಣ ಸವದಿ

mcbhadrashetti

ಕಲಬುರಗಿ: ಏಮ್ಸ್ ಸೇರಿದಂತೆ ಕೆಲವೊಂದು ಯೋಜನೆಗಳು ಕೈ ತಪ್ಪಿದಾಗ ಅಸಮಾಧಾನ ಆಗೋದು ಸಹಜ. ಹಾಗೆಂದು ಪ್ರತ್ಯೇಕ ರಾಜ್ಯದ ಕೂಗೆತ್ತೋದು ಸರಿಯಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಗುರುವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ, ಅತಿವೃಷ್ಟಿ ಇತ್ಯಾದಿಗಳ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗ್ತಿಲ್ಲ.  ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದರು.

ಹೈದರಾಬಾದ್ ಕರ್ನಾಟಕವನ್ನು ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಅಂತ ಮಾಡಿದೆ. ಹೆಸರು ಬದಲಾಯಿಸಿದರೆ ಕಲ್ಯಾಣ ಮಾಡಬಹುದೆಂಬ ಸದಿಚ್ಚೆಯಿಂದ ಮಾಡಿದ್ದೇವೆ. ಒಂದಲ್ಲ ಒಂದು ದಿನ ಈ ಭಾಗದ ಕಲ್ಯಾಣ ಆಗುತ್ತೆ. ಈ ಭಾಗದ ಕೆಲ ಯೋಜನೆಗಳು ಬೇರೆ ಕಡೆ ಸ್ಥಳಾಂತರವಾಗಿರೋದು ಗೊತ್ತಿಲ್ಲ ಎಂದರು.

ಐ.ಐ.ಟಿ ಬಂದಾಗ ಧಾರವಾಡಕ್ಕೆ ಕೊಟ್ಟಿದ್ದೆವು, ಐ.ಐ.ಐ.ಟಿ ಬಂದಾಗ ರಾಯಚೂರಿಗೆ ಕೊಟ್ಟಿದ್ದೆವು, ಎಲ್ಲ ಪ್ರದೇಶಗಳನ್ನು ಬ್ಯಾಲೆನ್ಸ್ ಮಾಡಲೆಂದು ಕೇಂದ್ರ ಸರ್ಕಾರ ಏಮ್ಸ್ ನ್ನು ಹುಬ್ಬಳ್ಳಿಗೆ ಕೊಟ್ಟಿರಬಹುದು. ಈ ಭಾಗಕ್ಕೆ ಆಗಿರೋ ಅನ್ಯಾಯಗಳನ್ನು ಸರಿಪಡಿಸೋ ಪ್ರಯತ್ನ ಮಾಡ್ತೇವೆ. ಅಖಂಡ ಕರ್ನಾಟಕ ರಚನೆಗೆ ಹಿರಿಯರು ಹೋರಾಟ ಮಾಡಿದ್ದಾರೆ. ಹೀಗಾಗಿ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ ಎಂದು ಸವದಿ ಹೇಳಿಕೆ.