ರಾಯಚೂರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ ಬುಧವಾರ ಭೇಟಿ ನೀಡಿ,ರಾಯರ ಮೂಲ ಬೃಂದಾವನದ ದರ್ಶನ ಪಡೆದರು.
ನಂತರ ಪತ್ನಿ ಉಷಾ ಜತೆಗೆ ಶ್ರೀಮಠದ ಗೋಶಾಲೆಯಲ್ಲಿ ಗೋ ಪೂಜೆ ಸಲ್ಲಿಸಿ ಗೋವುಗಳಿಗೆ ಹೂವಿನ ಹಾರ ಹಾಕಿ, ಹಣ್ಣು ಹಂಪಲು ನೀಡಿದರು.
ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಜತೆಗೆ ಗೋ ಶಾಲೆ ವೀಕ್ಷಣೆ ಮಾಡಿ ಮಠದಿಂದ ನಿರ್ಮಾಣವಾಗುತ್ತಿರುವ ಡಾರ್ಮೆಂಟರಿ ಕಾಮಗಾರಿಗೆ ಭೂ ಪೂಜೆ ಸಲ್ಲಿಸಿ, ಬೆಲ್ಲದ ತುಲಾ ಭಾರ ಕಾಣಿಕೆ ಸಲ್ಲಿಸಿದರು.ನಂತರ ತಾಲೂಕಿನ ಗಾಣದಾಳ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ, ಎಲೆ ಬಿಚ್ಚಾಲಿಯ ರಾಯರ ಏಕಶೀಲ ವೃಂದಾವನಕ್ಕೆ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದೆ ಪಕ್ಷದಿಂದ ಆಯೋಜನೆ ಮಾಡಲಾಗಿದ್ದ ಭಾರತ ಜೋಡೊ ಯಾತ್ರೆ ವೇಳೆ ಶ್ರೀಮಠಕ್ಕೆ ಬಂದಿದ್ದೆ. ಕಳೆದ ಬಾರಿ ಸಂಕಲ್ಪ ಮಾಡಿದ್ದಕ್ಕೆ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಎಲ್ಲರಿಗೆ , ನಾಡಿಗೆ ಒಳ್ಳೆಯದಾಗಲೆಂದು ರಾಯರಲ್ಲಿ ಬೇಡಿಕೊಂಡಿದ್ದೇನೆ ಎಂದರು.
ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎನ್ನುವ ವಿಚಾರದಲ್ಲಿ ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅವಶ್ಯಕತೆಯಿಲ್ಲಾ. ಪಕ್ಷ ಏನು ಹೇಳುತ್ತಾದೆ ಅದರಂತೆ ನಾವು ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗುತ್ತೇವೆಂದು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಹೇಳಿದ್ದೇವೆ. ಅದಕ್ಕೆ ನಾನು ಬದ್ದನಾಗಿದ್ದೇನೆ. ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ ಮುಂದಿನ ಸಿಎಂ ಎನ್ನುವ ಹೇಳಿಕೆ ನೀಡಿದ್ದಾರಂತೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷ ನನಗೆ ಎಲ್ಲಾ ನೀಡಿದೆ. ಪಕ್ಷದ ಅಧ್ಯಕ್ಷನಾಗಿದ್ದಿನಿ, ಡಿಸಿಎಂ ಆಗಿ ರಾಜ್ಯದಲ್ಲಿ ಇತಿಹಾಸ ಬರೆಯುತ್ತಿದ್ದೇನೆ. ದೊಡ್ಡ ದೊಡ್ಡ ಪೊರ್ಟ್ ಫೋಲಿಯೋ ನಿಭಾಯಿಸಿದಿನಿ. ನೀರಾವರಿ ಕ್ಷೇತ್ರದಲ್ಲಿ ಇತಿಹಾಸ ಬರಿತಿದಿನಿ. ಮಹಾದಾಯಿ, ಮೇಕೆದಾಟು ಹೋರಾಟ ಮಾಡಿದಿನಿ. ಪಕ್ಷ ನನಗೆ ಏನೇನು ಕೊಡಬೇಕು ಎಲ್ಲಾ ಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಬಸವನಗೌಡ ತುರವಿಹಾಳ ಸೇರಿ ಅನೇಕರು ಇದ್ದರು.