ಬೆಂಗಳೂರು: ಕಾಂಗ್ರೆಸ್ ಪಕ್ಷವು ಎಂದೂ ಯಾರ ಮೇಲೆಯೂ ದ್ವೇಷದ ರಾಜಕೀಯ ಮಾಡಿಲ್ಲ. ಆದರೆ, ಜಾಹೀರಾತು ವಿಚಾರದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದು ಯಾವ ರಾಜಕಾರಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕಬ್ಬನ್ ಉದ್ಯಾನದ ಬಾಲ ಭವನದಲ್ಲಿ ಶುಕ್ರವಾರ ನಡೆದ ‘ಬ್ರಾಂಡ್ ಬೆಂಗಳೂರು ಹಸಿರುಕರಣ’ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಡಿಯೂರಪ್ಪ ವಿರುದ್ಧ ಕಾನೂನು ಪ್ರಕ್ರಿಯೆ ದ್ವೇಷದ ರಾಜಕಾರಣ ಎಂಬ ಬಿಜೆಪಿ ಟೀಕೆಗೆ ಪ್ರತ್ರಿಕ್ರಿಯೆ ನೀಡಿದ ಅವರು, ನನಗೆ ಆ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷ ಯಾರ ಮೇಲೂ ದ್ವೇಷ ಮಾಡುವುದಿಲ್ಲ. ಅದರ ಬಗ್ಗೆ ನಾನು ಮಾತನಾಡಿದರೆ ವಿಚಾರ ಎಲ್ಲೆಲ್ಲೋ ಹೋಗುತ್ತದೆ. ಈ ವಿಷಯದಲ್ಲಿ ನನಗೂ ಅಯ್ಯೋ ಎನಿಸುತ್ತದೆ. ಇಂತಹ ಕಠಿಣ ಪರಿಸ್ಥಿತಿಯನ್ನು ನಾವು ಅನುಭವಿಸಿದ್ದೇವೆ ಎಂದರು.
ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದು ನ್ಯಾಯಾಲಯದ ಮುಂದೆ ಹಾಜರಾದರು. ಅವರ ವಿರುದ್ಧ ಪ್ರಕರಣ ಹಾಕಿರುವುದು ಯಾವ ರಾಜಕಾರಣ? ಬಿಜೆಪಿಯ ವಿರುದ್ಧದ ಜಾಹಿರಾತಿಗೂ ರಾಹುಲ್ ಗಾಂಧಿ ಅವರಿಗೂ ಏನು ಸಂಬಂಧ? ದ್ವೇಷ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಆ ಜಾಹೀರಾತು ಕೊಟ್ಟಿದ್ದು ರಾಹುಲ್ ಗಾಂಧಿ ಅವರೇ? ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾ ಅಥವಾ ಕೆಪಿಸಿಸಿ ಅಧ್ಯಕ್ಷರಾ? ಎಂದು ಪ್ರಶ್ನಿಸಿದರು.
ದರ್ಶನ್ ಪ್ರಕರಣದಲ್ಲಿ ಒತ್ತಡವಿಲ್ಲ: ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ದರ್ಶನ್ ಅವರ ಪ್ರಕರಣದಲ್ಲಿ ಯಾವುದೇ ಒತ್ತಡವಿಲ್ಲ. ಪ್ರಕರಣದಲ್ಲಿ 13 ಆರೋಪಿಗಳಿದ್ದು, ಮಾಧ್ಯಮಗಳು ಬೆಳಗ್ಗೆಯಿಂದ ಸಂಜೆವರೆಗೂ ಕ್ಯಾಮೆರಾ ಹಿಡಿದಿರುತ್ತೀರ, ಇದರಿಂದ ಪೊಲೀಸರಿಗೆ ಸ್ವತಂತ್ರವಾಗಿ ವಿಚಾರಣೆ ನಡೆಸಲು ಆಗುತ್ತಿಲ್ಲ ಎಂಬ ಕಾರಣಕ್ಕಾಗಿ ಶಾಮಿಯಾನ ಹಾಕಿಕೊಂಡಿದ್ದಾರೆ. ಈ ಪ್ರಕರಣದ ತನಿಖೆಗೆ ಸಂಬಂಧಿಸದಿಂತೆ ಗೃಹ ಸಚಿವು ಸೇರಿ ಯಾರೊಬ್ಬರೂ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.