ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆ ವ್ಯಾಪ್ತಿಯಲ್ಲಿ 1,657 ಕೆರೆ ಇವೆ. ಈ ಎಲ್ಲವನ್ನೂ ತುಂಬಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವರುಣನ ಅವಕೃಪೆಯಿಂದ ಕಳೆದ ವರ್ಷ ರಾಜ್ಯದ 200 ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿತ್ತು. ಆದರೆ ಈ ಬಾರಿ ತಾಯಿ ಚಾಮುಂಡೇಶ್ವರಿ ಹಾಗೂ ವರುಣನ ಕೃಪೆಯಿಂದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಮೈದುಂಬಿವೆ. ಈ ನಡುವೆ ನೆರೆಯ ತಮಿಳುನಾಡಿಗೆ ಸುಮಾರು 30 ಟಿಎಂಸಿ ನೀರು ಹರಿದುಹೋಗಿದೆ ಎಂದು ಸೋಮವಾರ ಕೆಆರ್‌ಎಸ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾವೇರಿ ನೀರು ನಿರ್ವಹಣಾ ಸಮಿತಿಯ ಸೂಚನೆಯಂತೆ ಪ್ರತಿದಿನ 1 ಟಿಎಂಸಿಯಂತೆ 31ರವರೆಗೆ ನೀರು ಹರಿಸಬೇಕಿತ್ತು. ಒಟ್ಟಾರೆ ವಾಡಿಕೆಯಂತೆ 40 ಟಿಎಂಸಿ ನೀರು ಬಿಡಬೇಕಿತ್ತು. ನಮ್ಮ ನದಿ ಪಾತ್ರದ ಜಲಾಶಯಗಳು ಮೈದುಂಬಿ ಹರಿದ ಹಿನ್ನೆಲೆಯಲ್ಲಿ ಪ್ರಸ್ತುತ 30 ಟಿಎಂಸಿ ನೀರು ಬಿಳಗುಂಡ್ಲು ಮಾಪನ ಕೇಂದ್ರದ ಮೂಲಕ ತಮಿಳುನಾಡಿಗೆ ತಲುಪಿದೆ. ಪ್ರಸ್ತುತ ಕನ್ನಂಬಾಡಿ ಹಾಗೂ ಕಬಿನಿ ಜಲಾಶಯದಿಂದ 51 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇನ್ನು 10 ಟಿಎಂಸಿ ನೀರು ತ.ನಾಡಿಗೆ ಹರಿದರೆ ಈ ವರ್ಷದ ಗಡುವು ತೀರಲಿದೆ. ವರುಣನ ಆರ್ಶೀವಾದದಿಂದ ಕಾನೂನನ್ನು ಪಾಲನೆ ಮಾಡಿದ್ದೇವೆ. ಅಂತೆಯೇ ಗರಿಷ್ಟಮಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ರಕ್ಷಣೆಗೆ ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ವಿವೇಕಾನಂದ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಮ್, ಕಾರ್ಯಪಾಲಕ ಇಂಜಿನಿಯರ್ ಜಯಂತ್ ಇತರರಿದ್ದರು.