ಜಿಲ್ಲೆ

ಪ್ರಯತ್ನ ವಿಫಲವಾಗಬಹದು, ಪ್ರಾರ್ಥನೆ ಫಲಕೊಡಲಿದೆ

ತುಮಕೂರು: ಅಮ್ಮ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ ಈ ಮೂರರ ನೆನಪು ಮನುಷ್ಯತ್ವ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಶ್ರೀಗಳ ಆಚಾರ ವಿಚಾರ ಮೈಗೂಡಿಸಿಕೊಂಡು ಮೋಕ್ಷ ಕಂಡುಕೊಳ್ಳಬೇಕಿದೆ ಎಂದು ಹೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್​, ಪ್ರಯತ್ನ ವಿಫಲವಾಗಬಹದು, ಪ್ರಾರ್ಥನೆ ಫಲಕೊಡಲಿದೆ ಎಂಬುದನ್ನು ಮಾರ್ಮಿಕವಾಗಿ ನುಡಿದರು.

ಮಂಗಳವಾರ ಸಿದ್ದಗಂಗಾಮಠದ ಡಾ.ಶಿವಕುಮಾರ ಶ್ರೀಗಳ 118ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಇಂತಹ ಪವಿತ್ರವಾದ ಸಂದರ್ಭದಲ್ಲಿ ಭಾಗವಹಿಸುವ ಶ್ರೀಗಳನ್ನು ಧ್ಯಾನಿಸುವ ಪುಣ್ಯ ನನ್ನದಾಗಿದೆ. ಅದಕ್ಕಿಂತ ನನ್ನ ತಂದೆತಾಯಿಗಳು ಶಿವಕುಮಾರ ಶ್ರೀಗಳ ಹೆಸರನ್ನೆ ಇಟ್ಟಿರುವುದು ಯಾವ ಜನ್ಮದ ಸುಕೃತವು. ಭಕ್ತನಿಗು ಭಗವಂತನಿಗು ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ಧರ್ಮಕರ್ಮದಲ್ಲಿ ನಂಬಿಕೆ ಇಟ್ಟಿರುವನು ನಾನು. ಶ್ರೀಗಳು ಹಾಕಿಕೊಟ್ಟ ಮಾರ್ಗ ನಮ್ಮ ಬದುಕಿಗೆ ದೊಡ್ಡ ಶಕ್ತಿಯಾಗಿದೆ ಎಂದರು.

ಶ್ರೀಮಠದ ಅನ್ನದಾಸೋಹವು ಶಾಲಾ ಮಕ್ಕಳಿಗೆ ಬಿಸಿಯೂಟ ಆರಂಭಿಸಲು ಅಂದಿನ ಸಿಎಂ ಎಸ್​.ಎಂ.ಕೃಷ್ಣಗೆ ಪ್ರೇರಣೆ ನೀಡಿತ್ತು. ಅನ್ನ, ಅಕ್ಷರ, ಸಂಸ್ಕಾರ ಕೊಟ್ಟು ಮನುಷ್ಯರನ್ನಾಗಿ ರೂಪಿಸಿದ ಪವಿತ್ರ ಕ್ಷೇತ್ರ ಇದು. ಮಹಾನ್​ ಚೇತನ ಶಿವಕುಮಾರ ಶ್ರೀಗಳ ತತ್ವಾದರ್ಶಗಳನ್ನು ಮುಂದಿಟ್ಟುಕೊಂಡು ಸಾಗೋಣ. ಶ್ರೀಮಠದಲ್ಲಿ ಬಡವ ಬಲ್ಲಿದನೆಂಬ ಭೇದಭಾವವಿಲ್ಲ ಎಂದು ಶ್ರೀಗಳನ್ನು ಸ್ಮರಿಸಿದರು.