ರಾಮನಗರ: ನಮ್ಮ ಮೆಟ್ರೋವನ್ನು ಬಿಡದಿವರೆಗೂ ವಿಸ್ತರಣೆ ಮಾಡಲು ಸರ್ವೇ ಮಾಡಿಸುತ್ತಿದ್ದು, ಈ ವಿಚಾರವಾಗಿ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ. ಹಾಗೇ ಬಿಡದಿ ಯೋಜನಾ ಪ್ರಾಧಿಕಾರ ರದ್ದು ಮಾಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತಿಸಲು ಆದೇಶ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬಿಡದಿಯ ಟೊಯೋಟಾ- ಕಿರ್ಲೋಸ್ಕರ್ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ತರಬೇತಿ ಕಟ್ಟಡವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು ಹೇಳಿದ್ದಿಷ್ಟು;
“ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ. ಇವರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಮೆಟ್ರೋ ಯೋಜನೆ ಇಲ್ಲಿಯ ತನಕ ವಿಸ್ತರಿಸುವಂತೆ ಶಾಸಕರು, ಸಂಸದರು ಮನವಿ ಸಲ್ಲಿಸಿದ್ದರು. ಹೀಗಾಗಿ ಬಿಎಂಆರ್‌ಸಿಎಲ್ ಅವರಿಗೆ ಯೋಜನಾ ವರದಿ ಸಿದ್ದಪಡಿಸಲು ತಿಳಿಸಿದ್ದೇನೆ.
ಬಿಡದಿ ಯೋಜನಾ ಪ್ರಾಧಿಕಾರವನ್ನು ತೆಗೆದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮಾಡುತ್ತೇವೆ. ಬಿಡದಿಯಲ್ಲಿ ಸುಮಾರು 10,000 ಎಕರೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು, ಯಾವುದೇ ಉದ್ದೇಶಕ್ಕೆ ಬಳಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಸಿಗುವ ಸೌಲಭ್ಯ ಈ ಭಾಗದಲ್ಲೂ ಸಿಗಬೇಕು ಎನ್ನುವ ಉದ್ದೇಶ ನಮ್ಮದು. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಈ ಎರಡು ಯೋಜನೆಗಳನ್ನು ಈ ಶುಭದಿನದಂದು ಘೋಷಿಸುತ್ತೇನೆ. ಈ ಯೋಜನೆಗಳ ಮೂಲಕ ಈ ಭಾಗ ಅಭಿವೃದ್ಧಿ ಆಗಬೇಕು, ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಾಗಬೇಕು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್್, ಬಿಡದಿ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಾದರೆ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಟೊಯೋಟಾ ಸಂಸ್ಥೆಗೂ ಕಿವಿಮಾತು ಹೇಳಿದ್ದೇನೆ. ಯಾರು ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿ ಕಳೆದುಕೊಳ್ಳುತ್ತಾರೋ ಅವರಿಗೆ ಹಾಗೂ ಅವರ ಮಕ್ಕಳಿಗೆ ಕೆಲಸದಲ್ಲಿ ಮೊದಲ ಆದ್ಯತೆ ನೀಡಬೇಕು. ಈ ವಿಚಾರವಾಗಿ ಸರ್ಕಾರದ ಕಾನೂನು ಕೂಡ ಇದೆ. ಕೇವಲ ಟೊಯೋಟಾ ಮಾತ್ರವಲ್ಲ ಎಲ್ಲಾ ಸಂಸ್ಥೆಗಳ ಜೊತೆ ಚರ್ಚೆ ಮಾಡಿ ಒಂದು ಪ್ರಕ್ರಿಯೆ ಮೂಲಕ ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡುವಂತೆ ಮಾಡಲಾಗುವುದು.
ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾದರೆ ಕೈಗಾರಿಕೆಗಳು ಹೆಚ್ಚು ಬರುತ್ತವೆಯೇ ಎಂದು ಕೇಳಿದಾಗ "ನಾವೆಲ್ಲರೂ ಬೆಂಗಳೂರಿನವರು. ನಮ್ಮ ಜಿಲ್ಲಾ ಕೇಂದ್ರ ರಾಮನಗರದಲ್ಲೇ ಇರಲಿ. ನಮ್ಮ ಅಭ್ಯಂತರವಿಲ್ಲ. ನಾವು ಬೆಂಗಳೂರಿನ ಹೆಸರನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದರು.
ಮೆಟ್ರೋ ವಿಸ್ತರಣೆ ಸಂಬಂಧಿಸಿದಂತೆ ಸ್ಥಳೀಯ ಭಾಗದ ಜನರನ್ನು ಕೇಳುತ್ತಿದ್ದೇನೆ. ಸಮೀಕ್ಷೆ ಮಾಡಿಸಿ, ಜನರಿಂದ ಅಭಿಪ್ರಾಯ ಪಡೆದು ಅವರ ಆಸೆ ಆಕಾಂಕ್ಷೆಗಳನ್ನು ತಿಳಿಯುತ್ತಿದ್ದೇನೆ. ಜನರ ಅಭಿಪ್ರಾಯ ಪಡೆದು ನಂತರ ಸರ್ಕಾರದ ಮುಂದೆ ಈ ಪ್ರಸ್ತಾವನೆ ಇಡುತ್ತೇನೆ. ಈ ವಿಚಾರವಾಗಿ ಮೆಟ್ರೋ ಸಂಸ್ಥೆಗೆ ಡಿಪಿಆರ್ ಮಾಡಲು ಹೇಳಿದ್ದೇನೆ. ಭೂಸ್ವಾಧೀನ ತಪ್ಪಿಸುವುದು ಹೇಗೆ, ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು, ಹೊರಗಿನಿಂದ ಬರುವವವರು ಇಲ್ಲೇ ತಮ್ಮ ವಾಹನ ನಿಲ್ಲಿಸಿ ಮೆಟ್ರೋ ಮೂಲಕ ಬೆಂಗಳೂರಿಗೆ ತೆರಳುವಂತೆ ಮಾಡಲು ವಾಹನ ನಿಲುಗಡೆ ಸ್ಥಳ ನಿರ್ಮಿಸುವುದು ಸೇರಿದಂತೆ ಅನೇಕ ಆಲೋಚನೆಗಳಿವೆ. ಎಲ್ಲವೂ ಪ್ಲಾನ್ ಆಗುತ್ತಿವೆ”.