ನೊಣವಿನಕೆರೆ: ಡಿಸಿಎಂ ಡಿ.ಕೆ.ಶಿವಕುಮಾರ್ ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಶ್ರೀ ಗುರುಗಿರಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲಾಡಳಿತ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಮಾಹಿತಿ ನೀಡದೆ ಬುಧವಾರ ಖಾಸಗಿ ಕಾರಿನಲ್ಲಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದು ಪೂರ್ವನಿಗದಿಯಂತೆ ಹೋಮ, ಸಂಕಲ್ಪ, ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ದೇವಾಲಯದ ಮೂಲಗಳು ಖಚಿತಪಡಿಸಿವೆ.
ಕಾಡಸಿದ್ದೇಶ್ವರ ಮಠ ಗುರುಭವನಕ್ಕೆ ತೆರಳಿ ಪೀಠಾಧ್ಯಕ್ಷ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆರ್ಶೀವಾದ ಪಡೆದ ಡಿಕೆಶಿ, ಕಾಡಸಿದ್ದೇಶ್ವರ ಗದ್ದಿಗೆಗೆ ತೆರಳಿ ಸಂಕಲ್ಪ,ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೀಠದ ಅಜ್ಜಯ್ಯರಾದ ಶ್ರೀ ವೀರಗಂಗಾಧರ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, ನೊಣವಿನಕೆರೆ ಮಠಕ್ಕೆ ಬರುವುದರಲ್ಲಿ ವಿಶೇಷವೆನಿಲ್ಲ. ಅದು ಗುರು ಹಾಗೂ ಶಿಷ್ಯರ ನಂಬಿಕೆ ವಿಚಾರ, ಹಂದನಕೆರೆ ಮಠಕ್ಕೆ ಹೋಗಿದ್ದೆ ಅಲ್ಲಿ ನಾನು ಒಂದು ರಸ್ತೆ ಮಾಡಿಸಿದ್ದೆ ಅದು ವ್ಯಾಜ್ಯದಲ್ಲಿತ್ತು ಅರಣ್ಯ ಇಲಾಖೆ ತಕರಾರು ಇತ್ತು, ನಾನೇ ಹೋಗಿ ಪರಿಶೀಲನೆ ನಡೆಸಿ ಅದನ್ನು ಸರಿಪಡಿಸಿ ಬಂದೆ ಎಂದರು.
ಮಾಜಿ ಸಚಿವ ನಾಗೇಂದ್ರ ನಿವಾಸದ ಮೇಲೆ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದೆ, ಅವರಿಬ್ಬರಿಗೂ ನೋಟಿಸ್ ಕೊಟ್ಟಿದ್ದೀವಿ ನಾವು ಆತಂರಿಕವಾಗಿ ಎಲ್ಲಾ ರೀತಿಯಲ್ಲಿ ತನಿಖೆ ಮಾಡಿದ್ದೀವಿ. ಅಧಿಕಾರಿಗಳು ದುರುಪಯೋಗ
ಪಡಿಸಿಕೊಂಡಿದ್ದಾರೆ. ಇದರಲ್ಲಿ ಶಾಸಕ, ಮಂತ್ರಿಗಳ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡರು.
ದೊಡ್ಡ ಮೊತ್ತ ಅಂದ ಮೇಲೆ ಬ್ಯಾಂಕ್ಗೆ ತನಿಖೆ ನಡೆಸಲು ಅಧಿಕಾರ ಇದೆ. ಜಾರಿ ನಿರ್ದೇಶನಾಲಯ (ಇಡಿ) ಬರುವಂತಹ ಅವಶ್ಯಕತೆ ಇರಲಿಲ್ಲ. ಅವರು ಬಂದಿದ್ದಾರೆ ಇಡಿ ದಾಳಿ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೆ, ನಾಗೇಂದ್ರ ಅವರದ್ದು ಯಾವುದೇ ರೀತಿಯ ತಪ್ಪಿಲ್ಲ ಅವರು ಏನೇ ಕೇಳಿದರು ಉತ್ತರ ಕೊಡುತ್ತಾರೆ ಎಂದರು.
ಪೀಠಾಧ್ಯಕ್ಷ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರಸ್ವಾಮೀಜಿ, ಹೆಗಡ್ಡಹಳ್ಳಿ ಮಠದ ಶ್ರೀವಿಶ್ವನಾಥಸ್ವಾಮೀಜಿ, ಆಡಳಿತ ಮಂಡಳಿಯ ಶಂಭು.ಜಿ.ಮಠ್, ಶಾಸ್ತ್ರೀಗಳಾದ ನಾಗರಾಜು, ರಾಜು ಜತೆಗಿದ್ದರು.