ಜಿಲ್ಲೆ

ಜಿಲ್ಲಾಸ್ಪತ್ರೆಗೆ ಸಿಬ್ಬಂದಿ ನೇಮಿಸಿ: ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಡಿಸಿಎಂ ಅಶ್ವತ್ಥನಾರಾಯಣ ಸೂಚನೆ

ರಾಮನಗರ: ಜಿಲ್ಲೆಯಲ್ಲಿ ನಿರ್ವಣವಾಗುತ್ತಿರುವ 250 ಹಾಸಿಗೆಗಳ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಗೆ ಅಗತ್ಯ ತಜ್ಞ ವೈದ್ಯರು, ವೈದ್ಯರು ಹಾಗೂ ಸಿಬ್ಬಂದಿಯನ್ನು ಆದ್ಯತೆ ಮೇರೆಗೆ ನೇಮಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 100 ಹಾಸಿಗೆಗಳ ಜಿಲ್ಲಾಸ್ಪತ್ರೆಯನ್ನು ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯಾಗಿ ಪರಿವರ್ತಿಸಿ ಕಾಯಕಲ್ಪ ನೀಡಬೇಕು. ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪೈಕಿ ಹೆಚ್ಚುವರಿ ಸಿಬ್ಬಂದಿಯನ್ನು ಹೊಸ ಜಿಲ್ಲಾಸ್ಪತ್ರೆಗೆ ನಿಯೋಜಿಸುವಂತೆ ತಿಳಿಸಿದರು.

ಟ್ರಾಮಾ ಸೆಂಟರ್: ಮೈಸೂರು ಮತ್ತು ಬೆಂಗಳೂರಿನ ನಡುವೆ ದಶಪಥ ನಿರ್ವಣವಾಗುತ್ತಿದ್ದು, ಮೈಸೂರು ಮತ್ತು ಬೆಂಗಳೂರು ಹೊರತುಪಡಿಸಿದರೆ ಮಧ್ಯಭಾಗದಲ್ಲಿ ಎಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ನೂತನವಾಗಿ ನಿರ್ವಣವಾಗುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಸೆಂಟರ್​ಗಾಗಿ ಬೇಕಿರುವ ಕಟ್ಟಡದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲ್ಲಿಗೆ ತಜ್ಞ ವೈದ್ಯರನ್ನು ನೇಮಿಸುವ ಬಗ್ಗೆ ಅಪರ ಮುಖ್ಯ ಕಾರ್ಯದರ್ಶಿ ಜತೆ ರ್ಚಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಶಿಧರ್, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ ಅಖ್ತರ್, ತೋಟಗಾರಿಕೆ ಇಲಾಖೆ ನಿರ್ದೇಶಕಿ ಫೌಜಾ ತಬನಮ್ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದರು.

ರೇಷ್ಮೆ ಮಾರುಕಟ್ಟೆ ಶೀಘ್ರ ಆರಂಭಿಸಿ

ಪೊಲೀಸ್ ತರಬೇತಿ ಕೇಂದ್ರದ ಹತ್ತಿರವಿರುವ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ವಣಕ್ಕೆ ಕನ್ಸಲ್ಟೆನ್ಸಿ ಸರ್ವೀಸ್ ಟೆಂಡರ್ ಕರೆಯಲಾಗಿದೆ. ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. 75 ಕೋಟಿ ರೂ. ವೆಚ್ಚವಾಗಲಿದ್ದು, ಈಗಾಗಲೇ ನಬಾರ್ಡ್​ನಿಂದ 35 ಕೋಟಿ ರೂ. ಬಂದಿದೆ ಎಂದು ರೇಷ್ಮೆ ಇಲಾಖೆ ನಿರ್ದೇಶಕರು ತಿಳಿಸಿದರು. ಹಾಲಿ ಇರುವ ರೇಷ್ಮೆ ಮಾರುಕಟ್ಟೆ ಸ್ಥಳ ಚಿಕ್ಕದಾಗಿದ್ದು, ರೇಷ್ಮೆ ಸಂಗ್ರಹಣೆ ಕಷ್ಟವಾಗುತ್ತಿದೆ. ಶೀಘ್ರವಾಗಿ ಹೊಸ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಿಸಿ ಎಂದು ಡಿಸಿಎಂ ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ತಿಳಿಸಿದರು.

ಮಾವು ಸಂಸ್ಕರಣ ಘಟಕದ ಪ್ಲಾನ್ ಸಿದ್ಧ

ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದಲ್ಲಿ ಆರಂಭವಾಗುವ ಮಾವು ಸೇರಿ ವಿವಿಧ ಹಣ್ಣುಗಳ ಸಂಸ್ಕರಣ ಘಟಕದ ಮಾಸ್ಟರ್​ಪ್ಲಾನ್ ಸಿದ್ಧಪಡಿಸಲಾಗಿದೆ. ಆಡಳಿತ ವಿಭಾಗ, ತರಬೇತಿ ಕೇಂದ್ರ, ವಸ್ತು ಪ್ರದರ್ಶನ ಹಾಗೂ ಮಾರಾಟ ಕೇಂದ್ರ, ಲೋಕಲ್ ಹಾಗೂ ಎಕ್ಸ್​ಪೋರ್ಟ್ ಪ್ಯಾಕ್​ಹೌಸ್, ಹಣ್ಣು ಮಾಗಿಸುವ ಛೇಂಬರ್, ಕೋಲ್ಡ್ ಸ್ಟೋರೇಜ್ ಸೇರಿ ಪ್ಲಾನ್ ಸಿದ್ಧಪಡಿಸಲಾಗಿದೆ. ಎಕ್ಸ್​ಪ್ರೆಷನ್ ಆಫ್ ಇಂಟರೆಸ್ಟ್ ಸಹ ಕರೆಯಲಾಗಿದೆ. ಆರ್​ಕೆವಿವೈ ರಫ್ತಾರ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ 10 ಕೋಟಿ ರೂ. ಪಡೆಯಲು ಯೋಜಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರು ವಿಡಿಯೋ ಸಂವಾದದಲ್ಲಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, ಯಾವುದೇ ತೊಂದರೆ ಇದ್ದಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಂಡು ಶೀಘ್ರವಾಗಿ ಮಾವು ಸಂಸ್ಕರಣ ಘಟಕದ ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಆಸ್ಪತ್ರೆಗಳು ಮೇಲ್ದರ್ಜೆಗೆ

ಚನ್ನಪಟ್ಟಣ ಹಾಗೂ ಮಾಗಡಿಯಲ್ಲಿ 50 ಹಾಸಿಗೆಗಳ ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಆರೋಗ್ಯ ಇಲಾಖೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಡಿಸಿಎಂ ತಿಳಿಸಿದರು.