ಜಿಲ್ಲೆ

ಆಸ್ತಿ ದಾಖಲೆಗಳ ಡಿಜಿಟೈಸೇಷನ್ ವ್ಯವಸ್ಥೆಗೆ ಡಿಸಿಎಂ ಮೆಚ್ಚುಗೆ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಸ್ವತ್ತುಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ಪಾಲಿಕೆ ಮುಂದಿನ ೆಬ್ರವರಿ ತಿಂಗಳೊಳಗೆ ಪೂರ್ಣಗೊಳಿಸುವ ಗಡುವನ್ನು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಸ್ತಿ ದಾಖಲೆಗಳ ಡಿಜಿಟೈಸೇಷನ್ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ಸಂಜೆ ಸೌತ್ ಎಂಡ್ ಸರ್ಕಲ್ನಲ್ಲಿರುವ ಕೆಂಪೇಗೌಡನಗರದ ಸಹ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿದ ಡಿಸಿಎಂ, ಅಲ್ಲಿ ನಡೆಯುತ್ತಿರುವ ಆಸ್ತಿ ಪುಸ್ತಕಗಳ ಸ್ಕಾನಿಂಗ್‌ಅನ್ನು ವೀಕ್ಷಿಸಿ ಮಾಹಿತಿ ಪಡೆದರು.

ಈ ವೇಳೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ರಿಜಸ್ಟರ್ ಪುಸ್ತಕದಲ್ಲಿ ಬರೆದಿರುವುದನ್ನು ಸ್ಕ್ಯಾನಿಂಗ್ ಮಾಡಿ, ಸ್ಕ್ಯಾನಿಂಗ್ ಆಗಿರುವ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ತದನಂತರ ಮಾಹಿತಿಯನ್ನು ಟೈಪ್ ಮಾಡಿ ವೆರಿಫಿಕೇಷನ್ ಆದ ನಂತರ ಸ್‌ಟಾವೇರ್‌ನಲ್ಲಿ ಪ್ರತಿಯೊಂದು ಆಸ್ತಿಯನ್ನು ಗಣಕಯಂತ್ರದ ಮೂಲಕ ಡಿಜಿಟೈಸೇಷನ್ ಮಾಡಲಾಗುತ್ತದೆ. ಇದನ್ನು ಯಾರೂ ನಕಲು ಮಾಡಲು ಸಾಧ್ಯವಿಲ್ಲ. ಒಮ್ಮೆ ಡಿಜಿಟೈಸೇಷನ್ ಮಾಡಿದ ನಂತರ ಆಸ್ತಿ ಖಾತಾವನ್ನು ಆನ್‌ಲೈನ್ ಮೂಲಕ ಎಲ್ಲಿ ಬೇಕಾದರೂ ವೀಕ್ಷಿಸಬಹುದು ಎಂದು ಮಾಹಿತಿ ನೀಡಿದರು.

ವೈಟ್ ಟಾಪಿಂಗ್ ಯೋಜನೆ ಪರಿಶೀಲನೆ:

ಸಿಲ್ವರ್ ಜೂಬ್ಲಿ ಪಾರ್ಕ್ ಜಂಕ್ಷನ್‌ನಿಂದ ಎಸ್.ಪಿ. ರಸ್ತೆ ಮೂಲಕ ಹಡ್ಸನ್ ರಸ್ತೆ (ಪಾದಚಾರಿ ಮೇಲ್ಸೇತುವೆ ವರೆಗೆ) 500 ಮೀ. ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಈ ಸ್ಥಳವನ್ನು ಪರಿಶೀಲನೆ ನಡೆಸಲಾಯಿತು. ಇದೇ ವೇಳೆ ಧರ್ಮರಾಯಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯು ತುಂಬಾ ಹಾಳಾಗಿದ್ದು , ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಪ್ರಧಾನ ಅಭಿಯಂತರ ಪ್ರಹ್ಲಾದ್, ಕಂದಾಯ ವಿಭಾಗದ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿವಿಕೆ ಅಯ್ಯಂಗಾರ್ ರಸ್ತೆ ಪರಿಶೀಲನೆ:

ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಹಾಗೂ ಒಟಿಸಿ ರಸ್ತೆಯ ನಡುವಿನ ಚಿಕ್ಕಪೇಟೆ ವೃತ್ತದ ಬಳಿ ಬರುವ ಅಡ್ಡ ರಸ್ತೆಗಳಾದ ಕಿಲಾರಿ ರಸ್ತೆ, ಆರ್.ಟಿ.ಸ್ಟ್ರೀಟ್ ರಸ್ತೆ, ಎ.ಎಸ್.ಆಚಾರ್ ಸ್ಟ್ರೀಟ್ ರಸ್ತೆಯನ್ನು ಸಮಗ್ರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವೈಟ್‌ಟಾಪಿಂಗ್, ಪಾದಚಾರಿ ಮಾರ್ಗ ಸುಧಾರಣೆ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇವುಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಮೆಜೆಸ್ಟಿಕ್- ಬಿಎಂಟಿಸಿ ಒಳ ರಸ್ತೆ ಪರಿಶೀಲನೆ:

ಧನ್ವಂತರಿ ರಸ್ತೆ ಮತ್ತು ಗುಬ್ಬಿ ತೋಟದಪ್ಪ ರಸ್ತೆಯ ನಡುವಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದ ಪ್ರಮುಖ ರಸ್ತೆಯನ್ನು ಬಿಎಂಟಿಸಿಯಿಂದ ಪಾಲಿಕೆಗೆ ಹಸ್ತಾಂತರಗೊಳಿಸಿಕೊಂಡು ವೈಟ್ ಟಾಪಿಂಗ್ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಸೂಚಿಸಿದರು. ಮೆಜೆಸ್ಟಿಕ್ ರಸ್ತೆ ತುಂಬಾ ಹಾಳಾಗಿದ್ದು, ತಾತ್ಕಾಲಿಕವಾಗಿ ದುರಸ್ತಿಪಡಿಸಿ ನಂತರ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.