ಕನಕಪುರ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಸಮಸ್ಯೆಗಳ ಮಹಾಪೂರವೇ ಹರಿದುಬಂತು. ನಗರ ಹಾಗೂ ತಾಲೂಕಿನ ಹಲವು ಸಮಸ್ಯೆಗಳನ್ನು ಒಳಗೊಂಡ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಪ್ರಮುಖವಾಗಿ ನಿವೇಶನ, ಮನೆ ನಿರ್ಮಾಣ, ಸ್ಮಶಾನಕ್ಕಾಗಿ ಜಮೀನು ಮೀಸಲು, ಸ್ಮಶಾನ ಅಭಿವೃದ್ಧಿ ಹಾಗೂ ಪ್ರಸಕ್ತ ವರ್ಷ ತಾಲೂಕಿನಲ್ಲಿ ಮಳೆ ಕೊರತೆ ಹೆಚ್ಚಾಗಿದ್ದು, ಕೂಡಲೇ ಕೆರೆಗಳನ್ನು ತುಂಬಿಸುವಂತೆ ರೈತರು ಅರ್ಜಿಗಳನ್ನು ಸಲ್ಲಿಸಿದರು. ಉದ್ಯೋಗ, ಆರೋಗ್ಯಕ್ಕೆ ನೆರವು ನೀಡುವಂತೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಆಗದೇ ಇರುವ ಕೆಲಸಗಳನ್ನು ಮಾಡಿಸಿಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸಬೇಡಿ. ಕೂಡಲೇ ನಿಯಮಾನುಸಾರವಾಗಿ ಕೆಲಸ ಮಾಡಿಕೊಡುವಂತೆ ಸೂಚಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ತಾಲೂಕಿನ ಜನತೆ ಬೆಂಗಳೂರಿಗೆ ಬಂದು ನನ್ನನ್ನು ಕಾಯುವುದು ಬೇಡ ಎನ್ನುವ ನಿಟ್ಟಿನಲ್ಲಿ ಸ್ವಕ್ಷೇತ್ರ ಕನಕಪುರದಲ್ಲಿ ಜನಸ್ಪಂದನ ಸಭೆ ನಡೆಸಿ, ಸಮಸ್ಯೆ ಆಲಿಸಲಾಗಿದೆ ಎಂದರು.
ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕನಕಪುರದಲ್ಲಿ ಪ್ರತಿ ತಿಂಗಳು 2ನೇ ಮತ್ತು 4ನೇ ಶನಿವಾರ ಕ್ಷೇತ್ರದ ಜನರಿಗೆ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ವಿಶೇಷಚೇತನ ಕಲ್ಯಾಣಾಧಿಕಾರಿ ಕೆ.ವಿ.ಜ್ಯೋತಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮುಖಂಡರಾದ ಆರ್.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವ್, ಎಸ್.ಎಸ್.ಶಂಕರ್, ಪುರುಷೋತ್ತಮ್, ಕೆ.ಎನ್.ದಿಲೀಪ್ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.
ಕನ್ನಡಿಗರಿಗೆ ಅನ್ಯಾಯ?! : ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ವಿಚಾರ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಸಚಿವರು ಈ ಬಗ್ಗೆ ಕ್ರಮವಹಿಸುತ್ತಾರೆ. ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಡಿಕೆಶಿ ಹೇಳಿದರು.
ತಾಲೂಕಿನ ಸುತ್ತಲೂ ಅರಣ್ಯ ಪ್ರದೇಶ ಹೊಂದಿಕೊಂಡಿರುವುದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಬೆಳೆನಾಶದ ಜತೆಗೆ ಸಾವು-ನೋವು ಹೆಚ್ಚಾಗುತ್ತಿವೆ. ಕಾಡಾನೆಗಳು ಗ್ರಾಮಗಳ ಬಳಿಯೇ ಬರುತ್ತಿವೆ. ಈ ಬಗ್ಗೆ ಈಗಾಗಲೇ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದೇಶಪಾಂಡೆ ಹೇಳಿಕೆ ಸಂತೋಷ: ಸಿ.ಎಂ.ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯಿಂದ ತೊಂದರೆಯಾದರೆ ನಾನೇ ಮುಖ್ಯಮಂತ್ರಿಯಾಗುತ್ತೇನೆಂಬ ಸಚಿವ ಆರ್.ವಿ.ದೇಶಪಾಂಡೆ ಅವರ ಹೇಳಿಕೆಯಿಂದ ಸಂತೋಷವಾಗಿದೆ. ಅವರು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದಾರೆ. ಅವರೂ ಪಕ್ಷಕ್ಕೆ ದುಡಿದಿದ್ದಾರೆ. ಅವರೂ ಸಿಎಂ ಯಾಕಾಗಬಾರದು ಎಂದು ಪತ್ರಕರ್ತರನ್ನು ಡಿಸಿಎಂ ಪ್ರಶ್ನಿಸಿದರು.
ನಾನೇ ಅಭ್ಯರ್ಥಿ: ಚನ್ನಪಟ್ಟಣದ ಉಪಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗುತ್ತೇನೆಂದು ಪುನಃ ಉಚ್ಛರಿಸಿದ ಡಿ.ಕೆ.ಶಿವಕುಮಾರ್, ನಾನು ಅಭ್ಯರ್ಥಿಯಾದರೆ ಕಾಂಗ್ರೆಸ್‌ನವನಾಗಿರುತ್ತೇನೆ. ಅದೇರೀತಿ ಬೇರೆಯವರು ನಮ್ಮ ಪಕ್ಷದಿಂದ ಅಭ್ಯರ್ಥಿಯಾದರೆ ಅವರೂ ಕಾಂಗ್ರೆಸ್‌ನವರೇ ಆಗಿರುತ್ತಾರೆ. ಅಭ್ಯರ್ಥಿ ಯಾರೇ ಆದರೂ ಅದು ನಾನೇ ಎಂದು ಭಾವಿಸಿ ಮತ ನೀಡಬೇಕು ಎಂದರು.
ನೀವು ನನಗಾಗಲೀ, ನಮ್ಮ ಪಕ್ಷದ ಅಭ್ಯರ್ಥಿಗಾಗಲೀ ಮತ ಹಾಕಿದರೆ ಅದು ಕಾಂಗ್ರೆಸ್‌ಗೆ ಹಾಕಿದಂತಾಗುತ್ತದೆ. ಸ್ಥಳೀಯ ಮುಖಂಡರು ಈಗಾಗಲೇ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಉಪಚುನಾವಣೆಯಲ್ಲಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಮೈತ್ರಿ ಪಕ್ಷದ ಅಭ್ಯರ್ಥಿ ಯಾರಾಗುತ್ತಾರೆ ಎಂಬುದಕ್ಕಿಂತ ನಮ್ಮ ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿ ಆಯ್ಕೆ ಮಾಡುವುದು ಸೂಕ್ತ. ನಾನು ಯಾರದ್ದೋ ಮಾತು ಕೇಳಿ ತೀರ್ಮಾನ ಮಾಡುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಅಭ್ಯರ್ಥಿ ಆಯ್ಕೆಯಾಗುತ್ತದೆ. ಈಗಾಗಲೇ ಕ್ಷೇತ್ರದ ಕಾರ್ಯಕರ್ತ ಮುಖಂಡರು ಅಭ್ಯರ್ಥಿಯ ಬಗ್ಗೆ ತಲೆಕೆಡಿಸಿಕೊಳ್ಳದೇ ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ಗಮನಹರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಸರ್ಕಾರ ಈಗಾಗಲೇ ಹತ್ತು ಹಲವು ಯೋಜನೆಗಳಿಗೆ ಕಾರ್ಯಸೂಚಿ ಹೊರಡಿಸಿದೆ. ಪ್ರಮುಖವಾಗಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಉದ್ಯೋಗ ಮೇಳ, ನಿವೇಶನ ಹಂಚಿಕೆ, ಮನೆ ಹಂಚಿಕೆಯಂತಹ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಇದ್ದವರು ಮಾಡಲಾಗದ ಕೆಲಸಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ. ಮೈತ್ರಿ ಪಕ್ಷದ ಮುಖಂಡರು ದೊಡ್ಡವರಿದ್ದಾರೆ. ಅವರು ಏನೇ ಮಾತನಾಡಲಿ ಸ್ವಂತ ಜಿಲ್ಲೆಯವರಾದ ನಾವು ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಮೂಲಕ ಉತ್ತರ ಹೇಳುತ್ತೇವೆ ಎಂದು ಹೇಳಿದರು.
ಡಿಕೆಶಿ ಸಮ್ಮುಖದಲ್ಲೇ ಮಾತಿನ ಚಕಮಕಿ : ಜನಸ್ಪಂದನದಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಸಮ್ಮುಖದಲ್ಲಿ ನಲ್ಲಹಳ್ಳಿಯಲ್ಲಿ ದಾರಿಯ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಎರಡು ತಲೆಮಾರಿನಿಂದ ನಲ್ಲಳ್ಳಿಯಲ್ಲಿ ವಾಸ ಮಾಡುತ್ತಿರುವ ಚಂದ್ರೇಗೌಡ, ಕರಿಗುಂಡೇಗೌಡ, ಬೊಮ್ಮೇಗೌಡ ಮಹದೇವ್, ಕೆಂಪಮ್ಮ ಎಂಬುವರು ಪಿತ್ರಾರ್ಜಿತವಾಗಿ ಬಂದಿರುವ ದಾರಿಯಲ್ಲಿ ಓಡಾಡುತ್ತಿದ್ದರು. ಗ್ರಾಮದ ಕುಟುಂಬವೊಂದು ತೊಂದರೆ ನೀಡುತ್ತಿದ್ದುಉ, ಈ ಸಂಬಂಧ ಗ್ರಾಮದಲ್ಲಿ ರಾಜಿ, ಪಂಚಾಯಿತಿ ನಡೆದೂ ಸಾತನೂರು ಠಾಣೆಯಲ್ಲಿ ದೂರು-ಪ್ರತಿ ದೂರುಗಳಾಗಿವೆ. ಈ ವಿಚಾರ ನ್ಯಾಯದಲ್ಲಿದ್ದರೂ ನಮಗೆ ಇಲ್ಲಿ ಓಡಾಡಲು ಬಿಡುತ್ತಿಲ್ಲವೆಂದು ಡಿಕೆಶಿ ಮುಂದೆ ದಾರಿಯ ವಿಚಾರದಲ್ಲಿ ಅವಲತ್ತುಕೊಂಡರು. ಈ ವೇಳೆ ಮಾತಿನ ಚಕಮಕಿ ನಡೆಯಿತು.