- ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮುಂಬರುವ ದಿನಗಳಲ್ಲಿ ರೈತರ ಪ್ರಗತಿ ಮತ್ತು ಭವಿಷ್ಯದ ಅನುಕೂಲಕ್ಕಾಗಿ ಟ್ರ್ಯಾಕ್ಟರ್ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸೌಲಭ್ಯಗಳಿಗಿಂತ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಕ್ಕೆ ಚಿಂತಿಸುತ್ತಿದ್ದೇವೆ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಧರ್ಮನಾಥ ಭವನದಲ್ಲಿ ಶುಕ್ರವಾರ ನಡೆದ ಬೆಳಗಾವಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಬ್ಯಾಂಕ್‌ನಲ್ಲಿ 6000 ಕೋಟಿ ರೂ.ಠೇವಣಿ ಸಂಗ್ರಹವಾಗಿದ್ದು, ಮುಂದೆ ಅದನ್ನು 8000 ಕೋಟಿ ರೂ.ವರೆಗೆ ಏರಿಸುವ ಗುರಿಯನ್ನು ಹೊಂದಿದ್ದೇವೆ. ಠೇವಣಿ ಇಡುವ ರೈತರಿಗೆ ನಬಾರ್ಡ್ ಬ್ಯಾಂಕಿನ ಜತೆಗೆ ಚರ್ಚೆ ಮಾಡಿಕೊಂಡು ಅವರಿಗೆ ಹೆಚ್ಚಿನ ಬಡ್ಡಿ ದರವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಈವರೆಗೆ 3400 ಕೋಟಿ ರೂ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ನೀಡಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಬೆಳೆಸಾಲ ನೀಡಿದ್ದು ಬೆಳಗಾವಿ ಡಿಸಿಸಿ ಬ್ಯಾಂಕ್ ಎಂದರು.
ಅಪ್ಪಾಸಾಹೇಬ ಕುಲಗೋಡೆ ಅವರು ಬಿಡಿಸಿಸಿ ಬ್ಯಾಂಕ್‌ಗೆ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಬ್ಯಾಂಕ್‌ಗೆ 280 ಕೋಟಿ ರೂ.ಅಧಿಕ ಹಣ ಠೇವಣಿ ಸಂಗ್ರಹವಾಯಿತು. 2025 ಅಕ್ಟೋಬರ್ 19ರಂದು ಬಿಡಿಸಿಸಿ ಬ್ಯಾಂಕಿನ ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 13 ಸ್ಥಾನಗಳಲ್ಲಿ ನಮ್ಮ ಪೆನಲ್‌ನ ಅಭ್ಯರ್ಥಿಗಳು ಗೆಲ್ಲುವ ಮೂಲಕ ಬಿಡಿಸಿಸಿ ಬ್ಯಾಂಕ್‌ನ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ರೈತರ ಶ್ರೆಯೋಭಿವೃದ್ಧಿಗೆ ಶ್ರಮಿಸಲು ಹೆಚ್ಚಿನ ಶಕ್ತಿ ಬಂದಂತಾಗುತ್ತದೆ ಎಂದರು.
ಈ ಚುನಾವಣೆಯು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕ ಲಕ್ಷ್ಮಣ ಸವದಿ, ಶಾಸಕ ರಮೇಶ ಜಾರಕಿಹೊಳಿ, ಮಾಜಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಮಾಡುತ್ತಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಪಕ್ಷಗಳು ಇಲ್ಲ. ಚುನಾವಣೆಯು ಪಕ್ಷಾತೀತ, ಜ್ಯಾತ್ಯತೀತವಾಗಿ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಈ ಪೆನಲ್‌ನಲ್ಲಿ ಇದ್ದಾರೆ. ಎಲ್ಲರೂ ಒಟ್ಟಾಗಿ ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಎದುರಿಸಲಿದ್ದು, ನಮಗೆ ರೈತರ ಸೇವೆಗೆ ಅವಕಾಶ ಒದಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ, ಬ್ಯಾಂಕ ನಿರ್ದೇಶಕ ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವಾಜಿ ಸುಂಠಕರ, ಕಾಂಗ್ರೆಸ್‌ನ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ನಿರ್ದೇಶಕ ರಾಜೇಂದ್ರ ಅಂಕಲಗಿ, ವಿಕ್ರಮ ಇನಾಂದಾರ, ಬೆಳಗಾವಿ ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರಗೌಡ ಪಾಟೀಲ ಇತರರಿದ್ದರು.