ಜಿಲ್ಲೆ

ಡಿಸಿಸಿ ಬ್ಯಾಂಕ್‌ಗೆ ಮತ್ತೆ ರಾಜಣ್ಣ ; ತಿಪಟೂರು ಮಾಜಿ ಶಾಸಕ ಕೆ.ಷಡಕ್ಷರಿ, ರಾಜಣ್ಣ ಪುತ್ರ ರಾಜೇಂದ್ರ ಪುನರಾಯ್ಕೆ

Tumakuru

ತುಮಕೂರು: ಸಹಕಾರಿ ಧುರೀಣ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಸತತ 6ನೇ ಬಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ)ನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಾಮಪತ್ರ ಹಿಂಪಡೆಯಲು ಗುರುವಾರ ಕೊನೇ ದಿನವಾಗಿದ್ದು, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ 14 ಸ್ಥಾನಗಳಿಗೆ ಅಂತಿಮವಾಗಿ 14 ಮಂದಿ ಮಾತ್ರ ಉಳಿದಿದ್ದು ಇದರೊಂದಿಗೆ ನೂತನ ನಿರ್ದೇಶಕ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದೆ.

ಗುರುವಾರ ಮಧ್ಯಾಹ್ನ 3ರವರೆಗೆ ನಾಮಪತ್ರ ಹಿಂಪಡೆ ಯಲು ಅವಕಾಶವಿತ್ತು. ‘ಎ’ ವರ್ಗದಿಂದ 10 ಸ್ಥಾನಗಳಿಗೆ ಒಟ್ಟು 20 ನಾಮಪತ್ರ ಸಲ್ಲಿಕೆಯಾಗಿದ್ದವು. ರಾಜಣ್ಣ ಮನವೊಲಿಕೆ ಬಳಿಕ 10 ಮಂದಿ ನಾಮಪತ್ರ ಹಿಂಪಡೆದರು. ಅಂತಿಮವಾಗಿ 10 ಮಂದಿ ಕಣದಲ್ಲಿ ಉಳಿದರು. ಇನ್ನುಳಿದಂತೆ ‘ಬಿ’ ವರ್ಗದಿಂದ ರಾಜಣ್ಣ ಪುತ್ರ ಆರ್.ರಾಜೇಂದ್ರ, ‘ಸಿ’ ವರ್ಗದಿಂದ ಎಸ್.ಲಕ್ಷ್ಮೀನಾರಾಯಣ್, ‘ಡಿ’ ವರ್ಗದಿಂದ ಬಿ.ನಾಗೇಶ್‌ಬಾಬು ಹಾಗೂ ಮಹಿಳಾ ಮೀಸಲು ‘ಡಿ1’ ವರ್ಗದಿಂದ ಅನ್ನಪೂರ್ಣ ವೆಂಕಟನಂಜಪ್ಪ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರೂ ಸಲ್ಲಿಸಿರಲಿಲ್ಲ. ಹೀಗಾಗಿ ಎಲ್ಲರೂ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ವಿ.ಅಜಯ್ ಘೋಷಿಸಿದ್ದಾರೆ.

ರಾಜಣ್ಣ, ಷಡಕ್ಷರಿ ಪುನರಾಯ್ಕೆ: ಮಾಜಿ ಶಾಸಕ ಕೆ.ಎನ್.ರಾಜಣ್ಣ ತುಮಕೂರು ಗ್ರಾಮಾಂತರ, ಮಾಜಿ ಶಾಸಕ ಕೆ.ಷಡಕ್ಷರಿ ತಿಪಟೂರಿನಿಂದ, ಎಸ್.ಹನುಮಾನ್ (ಕೊರಟಗೆರೆ), ಎಸ್.ಆರ್.ರಾಜಕುಮಾರ್ (ಚಿಕ್ಕನಾಯಕನಹಳ್ಳಿ), ಜಿಪಂ ಸದಸ್ಯ ಜಿ.ಜೆ.ರಾಜಣ್ಣ (ಮಧುಗಿರಿ), ಜಿ.ಎಸ್.ರವಿ (ಶಿರಾ), ಟಿ.ಎನ್.ನರಸಿಂಹಯ್ಯ (ಪಾವಗಡ), ಬಿ.ಶಿವಣ್ಣ (ಕುಣಿಗಲ್) ಪುನರಾಯ್ಕೆಯಾಗಿದ್ದಾರೆ. ಇನ್ನು ಎಂ.ಸಿದ್ದಲಿಂಗಪ್ಪ (ತುರುವೇಕೆರೆ) ಹಾಗೂ ಎಚ್.ಸಿ.ಪ್ರಭಾಕರ್ (ಗುಬ್ಬಿ) ಮೊದಲ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಬಹುತೇಕ ಹಳೆಯ ಆಡಳಿತ ಮಂಡಳಿಯೇ ಪುನರಾಯ್ಕೆಯಾಗಿದೆ. ರಾಜಣ್ಣ ಉಮೇದಿನಂತೆ 14 ಸ್ಥಾನಗಳಿಗೂ ಅವರ ಬೆಂಬಲಿಗರೇ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆ ಕೂಡ ಆಗಿದೆ. ಇನ್ನೊಂದು ವಾರದೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಔಪಚಾರಿಕ ಚುನಾವಣೆ ನಡೆಯಲಿದೆ.

ಸಹಕಾರಿ ಕ್ಷೇತ್ರದ ಆಲದಮರ ಕೆಎನ್ನಾರ್ !: ಜಿಲ್ಲಾ ಸಹಕಾರಿ ಕ್ಷೇತ್ರದ ಆಲದಮರ ಕೆ.ಎನ್.ರಾಜಣ್ಣ. 2003ರಿಂದ ಡಿಸಿಸಿ ಬ್ಯಾಂಕ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ಅವರು ಕಳೆದ ಬಾರಿ ಪುತ್ರನನ್ನು ನಿರ್ದೇಶಕನಾಗಿ ಆಯ್ಕೆ ಮಾಡುವ ಮೂಲಕ ಮುಂದಿನ ಉತ್ತರಾಧಿಕಾರಿಯನ್ನಾಗಿ ಬಿಂಬಿಸಿದ್ದರು. ಮಾಜಿ ಸಚಿವ, ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಕಳೆದ ಬಾರಿ ಉಪಾಧ್ಯಕ್ಷರಾಗಿ ಬ್ಯಾಂಕಿಗೆ ಪ್ರವೇಶ ಮಾಡಿದ್ದರಾದರೂ ರಾಜಣ್ಣ ಅವರ ನೆರಳಲ್ಲಿ ಕಳೆದುಹೋದರು. ಹಾಗಾಗಿ, ಈ ಬಾರಿ ಡಿಸಿಸಿ ಬ್ಯಾಂಕ್ ಸಹವಾಸವೇ ಬೇಡವೆಂದು ದೂರ ಉಳಿದರು. ಇನ್ನು ಕೆಎನ್ನಾರ್ ಎದುರು ಹಾಕಿಕೊಂಡ ಕೊಂಡವಾಡಿ ಚಂದ್ರಶೇಖರ್‌ಗೆ ಡಿಸಿಸಿ ಬ್ಯಾಂಕ್ ಬಾಗಿಲು ಸಂಪೂರ್ಣ ಬಂದ್ ಆಗಿದೆ.