ಜಿಲ್ಲೆ

ಠೇವಣಿ ಇಡಲು ಅನುಮಾನ ಬೇಡ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ

Kolar

ಕೋಲಾರ : ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸದೃಢವಾಗಿದ್ದು, ರೈತರು, ಮಹಿಳೆಯರಿಗೆ ಸಾವಿರಾರು ಕೋಟಿ ಸಾಲ ನೀಡಿ ಮರುಪಾವತಿಯಲ್ಲೂ ದೇಶಕ್ಕೆ ನಂ.1 ಆಗಿದೆ. ಠೇವಣಿ ಇಡಲು ಅನುಮಾನ ಬೇಡ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಡಿಸಿಸಿ ಬ್ಯಾಂಕ್‌ನಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಹೆಚ್ಚು ಹಣ ಠೇವಣಿ ಇಟ್ಟವರನ್ನು ಸನ್ಮಾನಿಸಿ ಮಾತನಾಡಿ, ನಿವೃತ್ತ ಪ್ರಾಂಶುಪಾಲರೊಬ್ಬರೂ ಸ್ವಯಂಪ್ರೇರಿತರಾಗಿ ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದು ಮತ್ತಷ್ಟು ಮಂದಿ ಇಲ್ಲಿ ಠೇವಣಿ ಇಡಲು ಪ್ರೇರಣೆ ನೀಡಿದಂತಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌಡಹಳ್ಳಿ ಗ್ರಾಮದ ನಿವೃತ್ತ ಅಸೋಸಿಯೇಟ್ ಪ್ರೊಫೆಸರ್ ಡಾ.ಜಯರಾಮರೆಡ್ಡಿ, ಜಿಲ್ಲೆಯ ರೈತರು, ಮಹಿಳೆಯರಿಗೆ ಬಡ್ಡಿರಹಿತ ಸಾಲಸೌಲಭ್ಯ ಕಲ್ಪಿಸಿ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟು ಜನರ ಮನೆ ಮಾತಾಗಿರುವ ಡಿಸಿಸಿ ಬ್ಯಾಂಕಿನಲ್ಲೇ ಉಳಿತಾಯ ಹಣ 50 ಲಕ್ಷ ರೂ. ಠೇವಣಿ ಇಡಲು ನಿರ್ಧರಿಸಿದ್ದೇನೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ನೀಡುವ ಡಿಸಿಸಿ ಬ್ಯಾಂಕಿನ ಧ್ಯೇಯ ಶ್ಲಾಘನೀಯ. ಬಡವರನ್ನು ಗುರುತಿಸಿ, ಯಾವುದೇ ಭದ್ರತೆ ಇಲ್ಲದೆ ಅವರ ಸ್ವಾಭಿಮಾನಿ ಬದುಕಿಗೆ ನೆರವಾಗುತ್ತಿದೆ. ಹಿಂದೆ ಬ್ಯಾಂಕ್ ದಿವಾಳಿಯಾಗಿತ್ತು. ಈಗ ಸದೃಢವಾಗಿದೆ ಎಂದರು.

ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದಿರುವ ಅನೇಕರು ವಾಣಿಜ್ಯ ಬ್ಯಾಂಕುಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಇಂತಹವರ ನಡುವೆ ಜಯರಾಮರೆಡ್ಡಿ ಡಿಸಿಸಿ ಬ್ಯಾಂಕಿನ ಕಾಳಜಿ ಗಮನಿಸಿ ಇಲ್ಲಿ ಠೇವಣಿ ಇಟ್ಟಿದ್ದಾರೆ ಎಂದರು.

ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಬ್ಯಾಂಕ್ ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ, ನಾಗೇಶ್, ಹುಸೇನ್ ದೊಡ್ಡಮನಿ, ಬ್ಯಾಂಕ್ ಸಿಬ್ಬಂದಿ ತಿಮ್ಮಯ್ಯ, ಮಂಗಳಗೌರಮ್ಮ, ದೀಪಿಕಾ, ಪದ್ಮಮ್ಮ, ಮಮತಾ, ಶುಭಾ, ರತ್ನಾ, ಸತೀಶ್, ಹ್ಯಾರಿಸ್, ಜಬ್ಬಾರ್, ಸಮೀಉಲ್ಲಾ ಇದ್ದರು.