ಕೋಲಾರ: ಆಡಳಿತ ಮಂಡಳಿಗೆ ಗೌರವ ನೀಡುತ್ತಲೇ ಸಿಬ್ಬಂದಿ ಬ್ಯಾಂಕನ್ನು ಆರ್ಥಿಕ ದಿವಾಳಿಗೆ ತಂದ ಇತಿಹಾಸ ಮರುಕಳಿಸಲು ಬಿಡುವುದಿಲ್ಲ, ನಮಗೆ ಆ ಗೌರವ ಬೇಕಿಲ್ಲ. ಬದ್ಧತೆಯಿಂದ ಕೆಲಸ ಮಾಡಿ, ಬ್ಯಾಂಕನ್ನು ನಂಬಿರುವ ಗ್ರಾಹಕರಿಗೆ, ಬಡವರಿಗೆ ಅನುಕೂಲ ಕಲ್ಪಿಸಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಎರಡೂ ಜಿಲ್ಲೆಯಲ್ಲಿ 5 ಲಕ್ಷ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ 2000 ಕೋಟಿ ರೂ. ಸಾಲ ನೀಡಿದ್ದರೂ ಫಲಾನುಭವಿಗಳ ಸಂಖ್ಯೆ ಇಷ್ಟಿಲ್ಲ, ನಮ್ಮ ಬ್ಯಾಂಕ್‌ನಿಂದ ಸಾಧ್ಯವಾಗಿದೆ ಎಂದರೆ ಅದು ನಿಮ್ಮಸಾಧನೆ ಎಂದು ಪ್ರಸಂಶಿಸಿದರು.
ಈ ಹಿಂದೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಗೌರವ ನೀಡುತ್ತಲೇ ಗೊಣ್ಣೆ ಹುಳುವಿನಂತೆ ಬ್ಯಾಂಕನ್ನು ಮುಗಿಸಿದ್ದನ್ನು ನೋಡಿದ್ದೇವೆ. ಅಂತಹ ಗೌರವ ನನಗೆ, ಆಡಳಿತ ಮಂಡಳಿಗೆ ಬೇಕಿಲ್ಲ. ಅನ್ನ ನೀಡಿರುವ ಬ್ಯಾಂಕ್ ಉಳಿಸುವ ಬದ್ದತೆ ತೋರಿಸಿ. ಕೈ ಶುದ್ಧವಾಗಿರಬೇಕು. ಬಡ ರೈತರು, ಮಹಿಳೆಯರು, ಶೋಷಿತರಿಗೆ ಸೌಲಭ್ಯ ಕೊಡಿಸುವ ಮೂಲಕ ಸಾರ್ಥಕತೆ ಮೆರೆಯಬೇಕು. ಮುಲಾಜಿಗೆ ಒಳಗಾದರೆ ಸಹಕಾರಿ ಸಂಸ್ಥೆ ಹಾಳಾಗುತ್ತದೆ, ಕೈ ಶುದ್ಧವಾಗಿಟ್ಟುಕೊಳ್ಳಿ ಸಾಕು ಎಂದರು.
ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಸೊಸೈಟಿಗಳ ಆಡಿಟ್ ಶೇ. 96 ಪೂರ್ಣಗೊಂಡಿದೆ, ಉಳಿದಿರುವ ಆರೇಳು ಸೊಸೈಟಿಗಳ ಆಡಿಟ್ ಪೂರ್ಣಗೊಳಿಸಿ ಶೇ.100ರ ಸಾಧನೆ ಮಾಡಬೇಕು. ಸೊಸೈಟಿ ತಪಾಸಣೆ ನಡೆಸುವ ಮೂಲಕ ಕಾರ್ಯದರ್ಶಿಗಳ ದರ್ಬಾರ್‌ಗೆ ಕಡಿವಾಣ ಹಾಕಬೇಕು. ಶೀಘ್ರ ನಬಾರ್ಡ್ ಅಧಿಕಾರಿಗಳು ಬ್ಯಾಂಕಿನಲ್ಲಿ ಪರಿಶೀಲನೆ ನಡೆಸಲಿರುವುದರಿಂದ ಎಲ್ಲ ದಾಖಲಾತಿ ಪಕ್ಕಾ ಇರಬೇಕು ಎಂದು ತಾಕೀತು ಮಾಡಿದರು.
ಮೈಕ್ರೋ ಎಟಿಎಂ: ಬ್ಯಾಂಕ್‌ಗೆ ಅ.7ರಂದು ಮೈಕ್ರೋ ಎಟಿಎಂ ಯಂತ್ರಗಳು ಸರಬರಾಜಾಗಲಿದ್ದು, ಮರುದಿನದಿಂದಲೇ ಸೊಸೈಟಿಗಳಿಗೆ ವಿತರಣೆ ಮಾಡಲಾಗುತ್ತದೆ. ಮಹಿಳಾ ಸಂಘಗಳು ಮತ್ತು ಹಾಲು ಸೊಸೈಟಿ ಸದಸ್ಯರಿಗೆ ಇನ್ನು ಮುಂದೆ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಬೇಕು. ಶೀಘ್ರ ಎಟಿಎಂ ಕಾರ್ಡ್ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಕಟಿಸಿದರು. ಬ್ಯಾಂಕ್ ನಿರ್ದೇಶಕರಾದ ಹನುಮಂತರೆಡ್ಡಿ, ನಾಗಿರೆಡ್ಡಿ, ಮೋಹನ್ ರೆಡ್ಡಿ, ವೆಂಕಟರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಶಿವಕುಮಾರ್, ಚೌಡಪ್ಪ, ನಾಗೇಶ್ ಮತ್ತಿತರರಿದ್ದರು.
3.26 ಕೋಟಿ ರೂ. ಸಾಲ ಬಾಕಿ: ಬ್ಯಾಂಕ್ ವತಿಯಿಂದ ಕಳೆದ ಸಾಲಿನಲ್ಲಿ ನೀಡಿರುವ ಕೆಸಿಸಿ ಸಾಲ 89 ಜನರಿಂದ 3.26,19,000 ರೂ. ವಸೂಲಾಗಿಲ್ಲ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಯಾವುದೇ ಸಾಲ ಸುಸ್ತಿ ಆಗದಂತೆ ಎಚ್ಚರ ವಹಿಸಬೇಕು. ಕಳೆದ ವರ್ಷದ ಶೇ.2.4 ಎನ್‌ಪಿಎ ದಾಖಲೆಯನ್ನು ಕನಿಷ್ಠ ಮಟ್ಟಕ್ಕೆ ತರಬೇಕು. ಮಧ್ಯಮಾವಧಿ ಸಾಲ ಪಡೆದಿರುವ ಗ್ರಾಹಕರು ಯೋಜನೆ ಆರಂಭಿಸದಿರುವ ಪ್ರಕರಣಗಳಿಗೆ ತಕ್ಷಣ ನೋಟಿಸ್ ನೀಡಿ, ಚಿನ್ನಾಭರಣದ ಮೇಲಿನ ಸಾಲ, ಗೃಹಸಾಲದ ಕಂತು ಸುಸ್ತಿಯಾಗದಂತೆ ಎಚ್ಚರ ವಹಿಸಬೇಕು ಎಂದು ಗೋವಿಂದಗೌಡ ಕಿವಿಮಾತು ಹೇಳಿದರು.