ಜಿಲ್ಲೆ

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕೈ ಅಭ್ಯರ್ಥಿಯ ಸೋಲಿಗೆ ಯತ್ನಿಸಿಲ್ಲ

ಮಾಲೂರು: ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ನಾನು ಆರ್ಥಿಕ ಸಹಾಯ ಮಾಡಿ ಕಾಂಗ್ರೆಸ್​ ಅಭ್ಯರ್ಥಿ ಸೋಲಿಸುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿಕೆ ನೀಡಿರುವ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರು ದಾಖಲೆಗಳ ಮೂಲಕ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಕಾಂಗ್ರೆಸ್​ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೂಲತ@ ಕಾಂಗ್ರೆಸ್​ನವನಾಗಿದ್ದೇನೆ. ಕಾಂಗ್ರೆಸ್​ನ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ$ ಬಲಗೊಳಿಸುತ್ತಿದ್ದು, ನನ್ನ ಮೇಲಿನ ಆರೋಪ ನಿರಾಧಾರ. ಮಂಡಲ ಪಂಚಾಯಿತಿಯಿಂದ ರಾಜಕೀಯ ಪ್ರವೇಶ ಮಾಡಿ ಜನರ ಆಶೀರ್ವಾದದಿಂದ ಎಲ್ಲ ಅವಕಾಶ ಪಡೆದಿದ್ದೇನೆ ಎಂದರು.

ಪ್ರಸ್ತುತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ನ ಆಡಳಿತ ಮಂಡಳಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಎರಡು ಜಿಲ್ಲೆಯ ಸಚಿವರು ಹಾಗೂ ನಾಯಕರ ಬಳಿ ಚರ್ಚಿಸಿ ಎಲ್ಲರ ಒಪ್ಪಿಗೆಯಂತೆ ತಾಲೂಕಿಗೆ ಮೂರು ನಿರ್ದೇಶಕ ಸ್ಥಾನಗಳನ್ನು ಪಡೆದುಕೊಂಡಿದ್ದೇನೆ. ಅದರಂತೆ ಮಾಲೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ದಿನ್ನಹಳ್ಳಿ ರಮೇಶ್​ ಆಯ್ಕೆಯಾದರೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ವಿನೋದ್​ ಕುಮಾರ್​ ಗೆಲುವು ಸಾಧಿಸಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಇತರೆ ಸಹಕಾರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ ಎಂದು ತಿಳಿಸಿದರು.

ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರು ಪದೇಪದೆ ನಮ್ಮ ಮೇಲೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು, ಇದು ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದುವರೆಗೂ ಪಕ್ಷದ ನಾಯಕರ ವಿಶ್ವಾಸ ಪಡೆದಿರುವ ನಾನು ಯಾರಿಗೂ ಅಗೌರವ ತೋರಲಿಲ್ಲ. ದಯವಿಟ್ಟು ಇಂತಹ ಮಾತುಗಳನ್ನು ಇಲ್ಲಿಗೆ ನಿಲ್ಲಿಸಬೇಕು ಎಂದರು.

ನೂತನ ನಿರ್ದೇಶಕರಾದ ದಿನ್ನಹಳ್ಳಿ ರಮೇಶ್​, ವಿನೋದ್​ ಕುಮಾರ್​, ಯೋಜನಾ ಪ್ರಾಧಿಕಾರ ಅಧ್ಯಕ್ಷ ಮೊಹಮ್ಮದ್​ ನಯೀಮ್​ ವುಲ್ಲಾ, ದರಖಾಸ್ತು ಸಮಿತಿ ಅಧ್ಯಕ್ಷ ಆನೇಪುರ ಹನುಮಂತಪ್ಪ, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಮಾಜಿ ಶಾಸಕ ಎ.ನಾಗರಾಜ್​, ಜಿಪಂ ಮಾಜಿ ಸದಸ್ಯ ಪಿ.ನಾರಾಯಣಸ್ವಾಮಿ, ಪುರಸಭೆ ಸದಸ್ಯರಾದ ಬುಲೆಟ್​ ವೆಂಕಟೇಶ್​, ಇಮ್ತಿಯಾಜ್​ ಖಾನ್​, ಎನ್​.ವಿ.ಮುರಳಿಧರ ಇದ್ದರು.

ಡಿಸಿಸಿ ಬ್ಯಾಂಕ್​ನಲ್ಲಿ ಕಾಂಗ್ರೆಸ್​ ಆಡಳಿತ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14 ನಿರ್ದೇಶಕರು ಕಾಂಗ್ರೆಸ್​ನಿಂದ ಜಯಗಳಿಸಿದ್ದು, ಈ ಬಾರಿ ಡಿಸಿಸಿ ಬ್ಯಾಂಕಿನ ಆಡಳಿತ ಚುಕ್ಕಾಣಿ ಕಾಂಗ್ರೆಸ್​ ಹಿಡಿಯಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಬ್ಯಾಂಕ್​ನಲ್ಲಿ ಕಾಂಗ್ರೆಸ್​ ಆಡಳಿತ ಬಂದ ನಂತರ ಮೊದಲಿನಂತೆ ಮಹಿಳೆಯರುಹಾಗೂ ರೈತರಿಗೆ ಬಡ್ಡಿ ರಹಿತ ಸಾಲ ವಿತರಿಸುವ ಕೆಲಸ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.