ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ  
ಜಿಲ್ಲೆ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಬಂಧನ

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ(ಜಿಲ್ಲಾ ಸಹಕಾರ ಕೇಂದ್ರ) ಬ್ಯಾಂಕ್‌ನಲ್ಲಿ ಬಹುಕೋಟಿ ರೂ. ಮೊತ್ತದ ನಕಲಿ ಚಿನ್ನದ ಅಡಮಾನ ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬುಧವಾರ ಬೆಂಗಳೂರಿನಲ್ಲಿ ಬಂಧಿಸಿದರು.

ಮಂಗಳವಾರ ಬೆಳಗ್ಗೆ ಅಪೆಕ್ಸ್ ಬ್ಯಾಂಕ್ ಅತಿಥಿ ಗೃಹದಲ್ಲಿ ಮಂಜುನಾಥ ಗೌಡ ಅವರಿದ್ದ ಕೊಠಡಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮಂಗಳವಾರ ಸಂಜೆ ಇಡಿ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಎರಡು ದಿನಗಳ ತೀವ್ರ ವಿಚಾರಣೆ ಬಳಿಕ ಅಧಿಕಾರಿಗಳು ಮಂಜುನಾಥ ಗೌಡ ಅವರನ್ನು ಬೆಂಗಳೂರಿನ 1ನೇ ಸಿಸಿಎಚ್ ನ್ಯಾಯಾಲಯಕ್ಕೆ ಬುಧವಾರ ಹಾಜರಿಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನ ಇಡಿ ವಶಕ್ಕೆ ನೀಡಿದರು.

ಹಗರಣ ನಡೆದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಶಿವಮೊಗ್ಗ ನಗರ ಶಾಖೆ ವ್ಯವಸ್ಥಾಪಕರಾಗಿದ್ದ ಶೋಭಾ, ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರವೀಂದ್ರ, ಶಶಿಕುಮಾರ್, ಡಿಸಿಸಿ ಬ್ಯಾಂಕ್ ಕೇಂದ್ರ ಶಾಖೆ ಪ್ರಧಾನ ವ್ಯವಸ್ಥಾಪಕ ನಾಗಭೂಷಣ, 2014ರಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಕಾರು ಚಾಲಕನಾಗಿದ್ದ ಶಿವಕುಮಾರ್ ಅವರ ಮನೆ ಮೇಲೂ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಶಿವಮೊಗ್ಗ ನಗರ ಶಾಖೆಗೂ ಭೇಟಿ ನೀಡಿ ದಾಖಲೆ ಪರಿಶೀಲಿಸಿದ್ದರು.

ಮುಂದುವರಿದ ದಾಳಿ, ದಾಖಲೆ ಪರಿಶೀಲನೆ

ಮತ್ತೊಂದೆಡೆ ನಕಲಿ ಬಂಗಾರ ಅಡಮಾನ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಎರಡನೇ ದಿನವು ಜಿಲ್ಲೆಯ ಶಿವಮೊಗ್ಗದ, ತೀರ್ಥಹಳ್ಳಿಯ ವಿವಿಧೆಡೆ ದಾಳಿ ಮುಂದುವರಿಸಿದರು. ಆರ್.ಎಂ.ಮಂಜುನಾಥ ಗೌಡ ಆಪ್ತರಾದ ಶಿವಮೊಗ್ಗದ ಅಚ್ಚುತರಾವ್ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್.ಸುಧೀರ್ ಅವರ ಮನೆ, ಇನ್ನೊಂದೆಡೆ ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಕೃಷ್ಣಮೂರ್ತಿ ಭಟ್ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಕೆಲ ದಾಖಲೆಗಳನ್ನು ಪರಿಶೀಲಿಸಿದರು.