ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಜನರಿಗೆ ಏನೇನು ಸವಲತ್ತು ಒದಗಿಸಬಹುದು? ಹೊಸ ಯೋಜನೆಗಳ ಅನುಷ್ಠಾನ ಹೇಗೆ? ಎಂಬ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸಿ ಶೀಘ್ರದಲ್ಲೇ ನನ್ನ ಹೊಸ ಚಿಂತನೆಗಳನ್ನು ಬಹಿರಂಗಪಡಿಸಲಿದ್ದೇನೆ ಎಂದು ಬ್ಯಾಂಕ್‌ನ ನೂತನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.
ಸಹಕಾರಿ ಬ್ಯಾಂಕ್‌ಗಳು ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್, ಆಸ್ಪತ್ರೆ ತೆರಯಲು ಅವಕಾಶವಿದೆ. ಪ್ರಾಥಮಿಕ ಸಹಕಾರ ಸಂಘಗಳನ್ನು ಬಹುಉದ್ದೇಶಿತ ಕೇಂದ್ರಗಳನ್ನಾಗಿ ರೂಪಿಸಲಾಗುವುದು. ಗ್ರಾಮೀಣ ಭಾಗದ ಜನರ ನಿತ್ಯದ ಅವಶ್ಯಕತೆಗಳು ಪ್ರಾಥಮಿಕ ಸಹಕಾರ ಸಂಘಗಳೇ ಪೂರೈಸುವಂತಾಗಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಲಾಗುವುದು. ಈಗ ಕೆಲವು ಹೋಬಳಿ ಕೇಂದ್ರಗಳಲ್ಲಿರುವ ಬ್ಯಾಂಕ್‌ಗಳಿಗೆ ಸುಸಜ್ಜಿತ ಕಟ್ಟಗಳನ್ನು ನಿರ್ಮಾಣ ಮಾಡಬೇಕಿದೆ. ಪ್ರಾಥಮಿಕ ಸಹಕಾರ ಸಂಘಗಳೆಲ್ಲವೂ ಸುಸಜ್ಜಿತ ಕಟ್ಟವನ್ನು ಹೊಂದಿಲ್ಲ. ನನ್ನ ಮುಂದೆ ಅನೇಕ ಸವಾಲುಗಳಿವೆ. ಅದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವೂ ಇದೆ ಎಂದರು.
ಪ್ರಾಥಮಿಕ ಸಹಕಾರ ಕೇಂದ್ರಗಳಲ್ಲಿ ಒಂದೇ ಸೂರಿನಡಿ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯವಾದ ಎಲ್ಲ ಸೇವೆಗಳು ಲಭ್ಯವಾಗಬೇಕು. ಗೊಬ್ಬರ, ಬೀಜ, ಸಿಮೆಂಟ್ ಮತ್ತಿತರ ಪರಿಕರಗಳು, ಬೆಳೆ ಮಾರಾಟ ವ್ಯವಸ್ಥೆ ಎಲ್ಲವನ್ನೂ ರೂಪಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಅಗತ್ಯ ನೆರವು ಕಲ್ಪಿಸಿದೆ. ಪ್ರಾಥಮಿಕ ಸಹಕಾರ ಸಂಘಗಳು ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಕಲ್ಪಿಸಿದೆ. ಸಾಮಾನ್ಯ ಸೇವಾ ಕೇಂದ್ರ, ಜನೌಷಧ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಸೂಪರ್ ಮಾರ್ಕೆಟ್‌ಗಳ ರೀತಿಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್.ಷಡಕ್ಷರಿ, ನಿರ್ದೇಶಕರಾದ ಎಂ.ಎಂ.ಪರಮೇಶ್, ಕೆ.ಪಿ.ದುಗ್ಗಪ್ಪಗೌಡ, ಜಿ.ಎನ್.ಸುಧೀರ್, ಶ್ರೀಪಾದ ಹೆಗಡೆ ನಿಸರಾಣಿ, ಜೆ.ಪಿ.ಯೋಗೇಶ್, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ವಾಸುದೇವ್ ಇತರರಿದ್ದರು.
ನನ್ನ ವಿರುದ್ಧ ಪ್ರಯತ್ನ
ಸಹಕಾರಿ ಕ್ಷೇತ್ರದಿಂದ ನನ್ನನ್ನು ತೆಗೆಯುವುದೇ ಬಹಳ ಜನರ ಆಶಯವಾಗಿತ್ತು. ಹೀಗಾಗಿ ಎರಡು ವರ್ಷ ನಾನು ಡಿಸಿಸಿ ಬ್ಯಾಂಕ್‌ನಿಂದ ಹೊರಗೆ ಉಳಿಯಬೇಕಾಯಿತು. ನನ್ನ ಬಂಗಾರದ ಕಳ್ಳ ಎಂದರು. ಕಬ್ಬಿಣವನ್ನು ಚಿನ್ನ ಮಾಡಿದ ಅಕ್ಕಸಾಲಿಗ ಎಂದೂ ಕರೆದರು. ನನ್ನ ವಿರುದ್ಧ ದೊಡ್ಡವರು ಕಟುಟೀಕೆ ಮಾಡಿದರು. ಅದೆಲ್ಲವನ್ನೂ ಆಶೀರ್ವಾದ ಎಂದುಕೊಂಡೆ. ನಾನು ಯಾರ ವಿರುದ್ಧವೂ ಟೀಕೆ ಮಾಡಲಿಲ್ಲ. ಆದರೆ ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ನನ್ನ ಅಭಿಮಾನಿಗಳು ತೋರಿದ ಪ್ರೀತಿ ಎಲ್ಲ ಬೇಸರವನ್ನೂ ಮರೆಸಿದೆ. ಸಹಕಾರಿ ವಲಯಕ್ಕೆ ಇರುವ ಶಕ್ತಿಯೇ ಅದು ಎಂದು ಪರೋಕ್ಷವಾಗಿ ವಿರೋಧಿಗಳ ವಿರುದ್ಧ ಆರ್.ಎಂ.ಮಂಜುನಾಥ ಗೌಡ ವಾಗ್ದಾಳಿ ನಡೆಸಿದರು.
ಜಾತಿ-ರಾಜಕೀಯ ಸಲ್ಲದು
ಸಹಕಾರಿ ವಲಯ ಯಾವಾಗಲೂ ಜಾತಿರಹಿತವಾಗಿರಬೇಕು. ರಾಜಕೀಯ ನುಸುಳಬಾರದು. ಕಳೆದ ಎರಡು ವರ್ಷ ಇದೆಲ್ಲವೂ ನಡೆದು ಹೋಯಿತು. ಇನ್ನು ಮುಂದೆ ಸಹಕಾರಿ ವಲಯದಲ್ಲಿ ಜಾತಿ ಹಾಗೂ ರಾಜಕೀಯಕ್ಕೆ ನಾನು ಅವಕಾಶ ನೀಡುವುದಿಲ್ಲ. ಮೊದಲು ಸಹಕಾರಿ ವಲಯ, ಬಳಿಕ ನಾನು ಪ್ರತಿನಿಧಿಸುವ ಪಕ್ಷಕ್ಕೆ ಆದ್ಯತೆ ಎಂದು ಆರ್‌ಎಂಎಂ ಹೇಳಿದರು.ಹಿಂದೆ ನನ್ನ ವಿರುದ್ಧವೂ ತನಿಖೆ ನಡೆದಿತ್ತು. ನಾನು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದೆ. ಈಗ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸರ್ಕಾರ ತನಿಖೆಗೆ ಆದೇಶಿಸಿದೆ. ಸಂಬಂಧಪಟ್ಟವರು ತನಿಖೆಗೆ ಸಹಕಾರ ನೀಡಬೇಕು. ತನಿಖೆಯಲ್ಲಿ ನಮ್ಮ ವಿರುದ್ಧವೇ ವರದಿ ಬರುತ್ತದೆ ಎಂದು ಬೆದರುವುದಕ್ಕಿಂತ ನಮ್ಮ ಪರವಾಗಿ ವರದಿ ಬರಬಹುದು ಎಂಬುದು ಆಶಾವಾದ.ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ