ಬೆಳಗಾವಿ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದರು. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಬ್ಯಾಂಕ್ ನಿರ್ದೇಶಕ ಶ್ರೀಕಾಂತ ಢವಣ, ಮಾಜಿ ಶಾಸಕ ಅರವಿಂದ ಪಾಟೀಲ, ಸುಭಾಷ ಢವಳೇಶ್ವರ ಇದ್ದರು. 
ಜಿಲ್ಲೆ

ಡಿಸಿಸಿ ಬ್ಯಾಂಕ್‌ಗೆ ಮತ್ತೆ ರಮೇಶ ಕತ್ತಿ ಸಾರಥ್ಯ

ಬೆಳಗಾವಿ: ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ)ನ 2020-2025ನೇ ಸಾಲಿನ ಅಧ್ಯಕ್ಷರಾಗಿ ರಮೇಶ ಕತ್ತಿ, ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಶನಿವಾರ ಪುನರಾಯ್ಕೆಯಾಗಿದ್ದಾರೆ.

ಡಿಸಿಸಿ ಬ್ಯಾಂಕ್‌ನ 13 ನಿರ್ದೇಶಕರ ಅವಿರೋಧ ಆಯ್ಕೆ ಮತ್ತು 3 ನಿರ್ದೇಶಕರ ಚುನಾವಣೆಯಿಂದ ಹಿಡಿದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕುರಿತು ಅಕ್ಟೋಬರ್ 10ರಿಂದ ನಡೆದ ಪ್ರಕ್ರಿಯೆ ನ.14ರ ವರೆಗೆ ರಾಜಕೀಯ ನಾಯಕರು, ಸಚಿವರು, ಶಾಸಕರು ಸಭೆಯ ಮೇಲೆ ಸಭೆ ನಡೆಸುತ್ತಿದ್ದರು. ಇದರಿಂದ ಈ ಬಾರಿ ಹೊಸಬರಿಗೆ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ಜನರು ನಿರೀಕ್ಷೆಯಿಟ್ಟಿದ್ದರು. ಆದರೆ, ರಾಜಕೀಯ, ಬ್ಯಾಂಕ್‌ನ ನಿರ್ದೇಶಕರ ಒಮ್ಮತ ಅಭಿಪ್ರಾಯ ಹಾಗೂ ಇನ್ನಿತರ ಕಾರಣಗಳಿಂದ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರೇ ಮತ್ತೆ ಬಿಡಿಸಿಸಿ ಬ್ಯಾಂಕ್‌ನ ಆಡಳಿತ ಚುಕ್ಕಾಣಿ ಹಿಡಿಯುವಂತಾಗಿದೆ.

ಪೂರ್ವಭಾವಿ ಸಭೆ: ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕುರಿತು ಶನಿವಾರ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಉಮೇಶ ಕತ್ತಿ, ಮಹಾಂತೇಶ ದೊಡಗೌಡರ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿ.ಪ. ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬ್ಯಾಂಕ್‌ನ ನಿರ್ದೇಶಕರು ಹಾಲಿ ಅಧ್ಯಕ್ಷ-ಉಪಾಧ್ಯಕ್ಷರನ್ನೇ ಮುಂದುವರಿಸಲು ಕೈಗೊಂಡಿರುವ ನಿರ್ಧಾರವನ್ನು ನಾಯಕರು ಪ್ರಕಟಿಸಿದರು.

ಒಮ್ಮತದ ನಿರ್ಧಾರ: ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಶತಮಾನೋತ್ಸವ ಸಂಭ್ರಮದಲ್ಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಹಾಗೂ ಹಾಲಿ ಅಧ್ಯಕ್ಷರೂ ಆಗಿರುವ ರಮೇಶ ಕತ್ತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರಕ್ಕೆ ಎಲ್ಲ ನಿರ್ದೇಶಕರು ಮತ್ತು ನಾಯಕರು ಒಮ್ಮತ ಸೂಚಿಸಿದ್ದಾರೆ ಎಂದು ತಿಳಿಸಿದರು.

ವರಿಷ್ಠರ ಅಪೇಕ್ಷೆ: ಡಿಸಿಸಿ ಬ್ಯಾಂಕ್‌ನ ಎಲ್ಲ ನಿರ್ದೇಶಕರು ಮತ್ತು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಬೇಕು, ಹಾಲಿ ನಿರ್ದೇಶಕರನ್ನೇ ಮುಂದುವರಿಸಬೇಕು, ಅಲ್ಲದೆ, ರಾಜ್ಯಕ್ಕೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮಾದರಿ ಆಗಬೇಕು ಎಂದು ಪಕ್ಷದ ಮುಖಂಡರು ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದೇ ಪ್ರಕಾರ ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನ ಅವಿರೋಧ ಆಯ್ಕೆ ಮಾಡಿದರೂ ಸಣ್ಣಪುಟ್ಟ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಮೂರು ಸ್ಥಾನಗಳಿಗೆ ಚುನಾವಣೆ ಎದುರಿಸಬೇಕಾಯಿತು. ವರಿಷ್ಠರ ಅಪೇಕ್ಷೆಯಂತೆ ಹಿಂದಿನ 13 ನಿರ್ದೇಶಕರನ್ನೇ ಉಳಿಸಿಕೊಳ್ಳಲಾಗಿದೆ ಎಂದು ಸಚಿವ ಸವದಿ ತಿಳಿಸಿದರು.

ಉತ್ತಮ ಸಂದೇಶ ರವಾನೆ: ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಎಲ್ಲ ನಿರ್ದೇಶಕರು ಹಾಗೂ ನಾಯಕರ ಜತೆ ಚರ್ಚಿಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯ ಸರ್ವಸಮ್ಮತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಹಿರಿಯ ಶಾಸಕ ಉಮೇಶ ಕತ್ತಿ, ನೇತೃತ್ವದಲ್ಲಿ ಮುಂದುವರಿಯುತ್ತೇವೆ. ಇಂದಿನ ಅವಿರೋಧ ಆಯ್ಕೆಯಿಂದ ಇಡೀ ಉತ್ತರ ಕರ್ನಾಟಕಕ್ಕೆ ಉತ್ತಮ ಸಂದೇಶ ರವಾನೆ ಆಗಿದೆ ಎಂದರು.

ಅಧ್ಯಕ್ಷ, ಉಪಾಧ್ಯಕ್ಷರಿಗೆ ಪೂರ್ಣಾವಧಿ ಅಧಿಕಾರ

ಜಿಲ್ಲೆಯ ಲಕ್ಷಾಂತರ ರೈತರ ಆಧಾರಸ್ತಂಭವಾಗಿರುವ ಮತ್ತು ವಾರ್ಷಿಕವಾಗಿ ನೂರಾರು ಕೋಟಿ ರೂ.ಆರ್ಥಿಕ ವಹಿವಾಟು ಹೊಂದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಅಧಿಕಾರಕ್ಕೆ 20 ತಿಂಗಳ ಅವಧಿ ಇರುವುದಿಲ್ಲ. ಅಲ್ಲದೆ, ರಮೇಶ ಕತ್ತಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲು ಯಾವುದೇ ಷರತ್ತು ಹಾಕಿಲ್ಲ. ಪೂರ್ಣಾವಧಿವರೆಗೂ ರಮೇಶ ಕತ್ತಿ, ಸುಭಾಷ ಢವಳೇಶ್ವರ ಅವರೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಮುಂದುವರಿಯುತ್ತಾರೆ. ಸಹಕಾರ ಕ್ಷೇತ್ರವೇ ಬೇರೆ ವಿಧಾನಸಭೆಯೇ ಬೇರೆ. ಹಾಗಾಗಿ ಇಲ್ಲಿ ಹೊಸಬರು, ಹಳಬರು ಎನ್ನುವ ಪ್ರಶ್ನೆ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.

ನ. 22ರಂದು ಸಮನ್ವಯ ಸಭೆ

2015-2020ನೇ ಸಾಲಿನ ಆಡಳಿತ ಅವಧಿಯಲ್ಲಿ ಆಗಿರುವ ಸಾಲ ಸೌಲಭ್ಯ ಹಂಚಿಕೆಯಲ್ಲಿ ತಾರತಮ್ಯ ಮತ್ತು ಲೋಪ-ದೋಷಗಳ ಕುರಿತು ಇರುವ ದೂರುಗಳ ಸರಿಪಡಿಸಿಕೊಂಡು ಮುನ್ನಡೆಯುವ ದೃಷ್ಟಿಯಿಂದ ನ. 22ರಂದು ಸಮನ್ವಯ ಸಭೆ ಕರೆಯಲಾಗುವುದು. ಎಲ್ಲ ನಿರ್ದೇಶಕರು ಮತ್ತು ಅಧಿಕಾರಿಗಳು ಸಿಬ್ಬಂದಿ ಜತೆಗೆ ಚರ್ಚಿಸಿ ಯೋಜನೆ ಮಾಡಲಾಗುವುದು. ಈ ಹಿಂದೆ ಆಗಿರುವ ಸಮಸ್ಯೆಗಳು ಮರುಕಳಿಸಲಾರವು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ರಾಜ್ಯದಲ್ಲಿ ಮುಂದಿನ ತಿಂಗಳು ನಡೆಯುವ ಅಪೆಕ್ಸ್ ಬ್ಯಾಂಕ್‌ಗೆ ಜಿಲ್ಲೆಯಿಂದ ಯಾರು ಆಯ್ಕೆಯಗಬೇಕು ಎಂಬ ಬಗ್ಗೆ ಮುಂಬರುವ ದಿನಗಳಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲೆಯಿಂದ ಅವಿರೋಧವಾಗಿ ಆಯ್ಕೆ ಮಾಡಲಾಗುವುದು.| ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ