ಜಿಲ್ಲೆ

18ಕ್ಕೆ ಮೈಕ್ರೋ ಎಟಿಎಂ ಕಾರ್ಯಾರಂಭ

Kolar

ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ಸಹಕಾರ ಕ್ಷೇತ್ರದಲ್ಲಿ ಮೈಕ್ರೋ ಎಂಟಿಎಂ ವ್ಯವಸ್ಥೆ ಜಾರಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಿದ್ಧತೆ ನಡೆಸಿದ್ದು, ಸೆ.18ಕ್ಕೆ ಲೋಕಾರ್ಪಣೆ ಮಾಡಲು ಮುಹೂರ್ತ ನಿಗದಿಯಾಗಿದೆ.

ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು ಈ ಸಂಬಂಧ ಸೋಮವಾರ ಮೈಕ್ರೋ ಎಂಟಿಎಂಗಳನ್ನು ಒದಗಿಸುತ್ತಿರುವ ಮುಂಬೈನ ಟಾಟಾ ಕನ್ಸಟೆನ್ಸಿ ಹಾಗೂ ಪಾಂಡಿಚೆರಿಯ ಇಂಟಿಗ್ರಾ ಮೈಕ್ರೋ ಸಿಸ್ಟಮ್ಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಗುಣಮಟ್ಟದ ಮೈಕ್ರೋ ಎಂಟಿಎಂಗಳನ್ನು ಸರಬರಾಜು ಮಾಡುವಂತೆ ತಿಳಿಸಿದರು.

ನಬಾರ್ಡ್ ಆರ್ಥಿಕ ನೆರವಿನಿಂದ ಮೈಕ್ರೋ ಎಟಿಎಂ ಖರೀದಿ ಮಾಡಲಾಗುತ್ತಿದ್ದು, ಇದರಿಂದ ಫ್ಯಾಕ್ಸ್‌ಗಳಲ್ಲಿ ಆರ್ಥಿಕ ವ್ಯವಹಾರ ಪಾರದರ್ಶಕವಾಗಿ ನಡೆಸಲು ಅನುಕೂಲವಾಗಲಿದೆ. ಈ ವ್ಯವಸ್ಥೆಗೆ ಮಹಿಳೆಯರು, ರೈತರಿಂದ ಶುಲ್ಕ ಸಂಗ್ರಹಿಸುವುದಿಲ್ಲ, ಇತರ ವಾಣಿಜ್ಯ ಬ್ಯಾಂಕುಗಳಂತೆ ಎಟಿಎಂ ಬಳಕೆಗೆ ರೂಪೇ ಕಾರ್ಡ್ ನೀಡಲಾಗುವುದು ಎಂದರು.

ಮೈಕ್ರೋ ಎಟಿಎಂ ಮೂಲಕ ಗ್ರಾಮೀಣ ಕುಟುಂಬಗಳಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಲಾಗುತ್ತಿದೆ, ಇರುವ ಸ್ಥಳದಲ್ಲೇ ಹಣ ಪಾವತಿ, ಡ್ರಾ ಎರಡೂ ಸೌಲಭ್ಯ ಸಿಗಲಿದ್ದು, ಸಾಲ ಮರುಪಾವತಿ, ಉಳಿತಾಯದ ಹಣ ಪಾವತಿಗೆ ಸ್ವೀಕೃತಿ ಸಿಗುವುದರಿಂದ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ನಂಬಿಕೆ ಬಲಗೊಳ್ಳಲಿದೆ ಎಂದರು.

ಡಿಸಿಸಿ ಬ್ಯಾಂಕ್ ಹಾಗೂ ಎರಡೂ ಜಿಲ್ಲೆಗಳ ಎಸ್‌ಎಫ್‌ಸಿಎಸ್‌ಗಳಲ್ಲಿ ವಹಿವಾಟು ನಡೆಸುವ ಎಲ್ಲ ರೈತರು, ಮಹಿಳಾ ಸಂಘಗಳ ಸದಸ್ಯರು, ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ 5 ಲಕ್ಷ ಕಾರ್ಡ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬ್ಯಾಂಕ್ ಎಂಡಿ ರವಿ ಮಾತನಾಡಿ, ಮೈಕ್ರೋ ಎಂಟಿಎಂ ಹೇಗೆ ಬಳಕೆ ಮಾಡಬೇಕೆಂದು ಸಿಬ್ಬಂದಿಗೆ ತರಬೇತಿ ನೀಡಲಾಗುವುದು, ಪ್ರತಿ ಫ್ಯಾಕ್ಸ್‌ನಲ್ಲಿ ಈ ಸೌಲಭ್ಯ ಸಿಗುವುದರಿಂದ ಗ್ರಾಹಕರಿಗೆ ವಹಿವಾಟಿನ ಬಗ್ಗೆ ತತ್ವರಿತವಾಗಿ ಮಾಹಿತಿ ಪಡೆಯಲು ಸುಲಭವಾಗಲಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್, ಎಜಿಎಂ ಶಿವಕುಮಾರ್, ಗಣಕೀಕರಣ ವಿಭಾಗದ ತಾಂತ್ರಿಕ ಸಿಬ್ಬಂದಿ ಅಬ್ದುಲ್ಲಾ ಹಾರೀಸ್, ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.