ಜಿಲ್ಲೆ

ಗಣಕೀಕರಣ ಮುಗಿಸದಿದ್ರೆ ಸೌಲಭ್ಯ ಕಟ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಎಚ್ಚರಿಕೆ

Kolar

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ರೇಷ್ಮೆ ಬೆಳೆಗಾರರ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಲು ಆಸಕ್ತಿ ತೋರದ ಸಂಘದ ಸಿಇಒಗಳು ಕೆಲಸಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚಿಸಿದರು.

ನಗರದ ಜಿಲ್ಲಾ ಸಹಕಾರ ಭವನದಲ್ಲಿ ಶನಿವಾರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಎಸ್‌ಎಫ್‌ಸಿಎಸ್ ಮತ್ತು ಫ್ಯಾಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗಣಕೀಕರಣ ಕಾರ್ಯ ಜೂನ್ ಅಂತ್ಯದೊಳಗೆ ಮುಗಿಸಿರಬೇಕು. ಇಲ್ಲವಾದಲ್ಲಿ ಯಾವುದೇ ಆರ್ಥಿಕ ಸೌಲಭ್ಯ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ, ಮಾಲೂರು ಸೊಸೈಟಿಗಳಲ್ಲಿ ಗಣಕೀಕರಣ ಕಾರ್ಯಕ್ಕೆ ಸಿಇಒಗಳಿಂದ ಸ್ಪಂದನೆ ಸಿಕ್ಕಿಲ್ಲ, ಜೂ.5ರೊಳಗೆ ಗಣಕೀಕರಣದ ಮೊದಲ ಹಂತ ಮುಗಿಸದಿದ್ದರೆ ಸಂಘಗಳಿಗೆ ಬ್ಯಾಂಕಿನಿಂದ ಸಹಕಾರ ಸಿಗುವುದಿಲ್ಲ ಎಂದರು.

ಸಂಘಗಳ ಮೂಲಕ ನೀಡುವ ಸಾಲ ಇನ್ನಿತರ ಆರ್ಥಿಕ ನೆರವಿಗೆ ಸಂಬಂಧಿಸಿದ ಲೆಕ್ಕಪತ್ರ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಗಣಕೀಕರಣಕ್ಕೆ ಆದ್ಯತೆ ನೀಡಲಾಗಿದೆ. ಸಿಬ್ಬಂದಿಗೂ ತರಬೇತಿ ನೀಡಲಾಗಿದೆ, ಆದರೂ ನಿರ್ಲಕ್ಷ್ಯ ಏಕೆ, ಸಿಇಒಗಳಲ್ಲಿ ದಕ್ಷತೆ ಇಲ್ಲದಿದ್ದರೆ ಸಂಘಗಳು ದಿವಾಳಿಯಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಸೆಕ್ಷನ್ 11 ವ್ಯಾಪ್ತಿಯಲ್ಲಿದ್ದ ಡಿಸಿಸಿ ಬ್ಯಾಂಕನ್ನು ನಷ್ಟದಿಂದ ಪಾರು ಮಾಡಲಾಗಿದೆ. 310 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ರೈತರಿಗೆ ಕೆಸಿಸಿ ಸಾಲ, ಮಹಿಳಾ ಸಂಘಗಳಿಗೆ ಸಾಲ ಸೇರಿ ವಿವಿಧ ರೀತಿಯ ಸಾಲ ನೀಡಿದ್ದು, ಪ್ರಾಮಾಣಿಕವಾಗಿ ಮರುಪಾವತಿ ಆಗುತ್ತಿದೆ ಎಂದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾವುದೇ ಸಾಲಮರು ಪಾವತಿ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಮಾಡಿಲ್ಲ, ಕೆಲವು ಮಂದಿ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೆ ಪ್ರತಿ ತಿಂಗಳು 26 ಕೋಟಿ ರೂ. ವಸೂಲಿ ಆಗುತ್ತಿತ್ತು, ಆದರೆ ಈ ಎರಡು ತಿಂಗಳಿಂದ ಕೇವಲ 3 ಕೋಟಿ ರೂ. ಮಾತ್ರ ವಸೂಲಿಯಾಗಿದೆ. ಸಾಲಗಾರರ ಮನವೊಲಿಸಿ ಮರುಪಾವತಿ ಮಾಡಿಸಿ ಎಂದು ತಾಕೀತು ಮಾಡಿದರು.

ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಕಾರ್ಯದರ್ಶಿಗಳು, ಸಿಇಒಗಳು ಸಬೂಬುಗಳು ಹೇಳಿಕೊಂಡು ಕುಳಿತರೆ ಕೆಲಸ ಆಗುವುದಿಲ್ಲ, ಗಣಕೀಕರಣಗೊಳಿಸಬೇಕು. ಇನ್ನು ನೆಪ ಹೇಳಿಕೊಂಡು ಕುಳಿತರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ, ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಕೆ.ವಿ.ದಯಾನಂದ್, ಬಿ.ವಿ.ವೆಂಕಟರೆಡ್ಡಿ,ಮೋಹನ್ ರೆಡ್ಡಿ, ನಾಗಿರೆಡ್ಡಿ, ನಾರಾಯಣರೆಡ್ಡಿ, ಹನುಮಂತರೆಡ್ಡಿ, ನಾಗನಾಳ ಸೋಮಣ್ಣ, ಗೋವೀಂದರಾಜ್, ಅನಿಲ್ ಕುಮಾರ್, ಚೆನ್ನರಾಯಪ್ಪ, ಎಂಡಿ ರವಿ, ಎಜಿಎಂಗಳಾದ ಶಿವಕಮಾರ್, ಖಲೀಂವುಲ್ಲಾ, ಬೈರೇಗೌಡ ಉಪಸ್ಥಿತರಿದ್ದರು.