ಜಿಲ್ಲೆ

ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳೆಯರಲ್ಲಿನ ಪ್ರಾಮಾಣಿಕತೆಯಿಂದ ಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿಯಾಗಿದೆ

Kolar

ಕೋಲಾರ: ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳೆಯರಲ್ಲಿನ ಪ್ರಾಮಾಣಿಕತೆಯಿಂದ ಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಭಿಪ್ರಾಯಿಸಿದರು.

ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಬುಧವಾರ ಮಹಿಳಾ ಸಂಘಗಳಿಗೆ 2.20 ಕೋಟಿ ರೂ. ಸಾಲ ವಿತರಣೆ ಹಾಗೂ ಕಿಸಾನ್ ಲಕ್ಷ್ಮೀ ಠೇವಣಿ ಬಾಂಡ್ ವಿತರಿಸಿ ಮಾತನಾಡಿದರು.

ಬ್ಯಾಂಕಿನಿಂದ ಪಡೆದ ಸಾಲವನ್ನು ಮರು ಪಾವತಿಸಲು ಮಹಿಳೆಯರು ತೋರಿದ ಬದ್ಧತೆಯಿಂದ ನವ ಚೈತನ್ಯದೊಂದಿಗೆ ಆಡಳಿತ ಮಂಡಳಿ ಕೆಲಸ ಮಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಬ್ಯಾಂಕಿನಿಂದ ಇನ್ನಷ್ಟು ಆರ್ಥಿಕ ನೆರವು ಯೋಜನೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಕರೊನಾದಿಂದ ಸರಳ ಸಮಾರಂಭ: ಕರೊನಾದಿಂದಾಗಿ ಸಾಲ ವಿತರಣಾ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ನಡೆಸಲಾಗುತ್ತಿದೆ. ಹೆಚ್ಚು ಜನ ಸೇರುವ ಕಡೆ ವೈರಸ್ ಹರಡುವುದು ಸಹಜ. ಹಾಗಾಗಿ ಸಂಘದ ಕಚೇರಿಯಲ್ಲೇ ಕಾರ್ಯ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆಯುವ ಮಹಿಳೆಯರು ನಮ್ಮ ಬ್ಯಾಂಕಿನಲ್ಲೇ ಉಳಿತಾಯದ ಹಣ ಠೇವಣಿ ಇಡಬೇಕು. ಯಾವುದೇ ಭದ್ರತೆಯಿಲ್ಲದೆ ನಿಮಗೆ ಸಾಲ ನೀಡಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಬ್ಯಾಂಕಿಗೆ ಶಕ್ತಿ ತುಂಬುವ ಕೆಲಸ ನಿಮ್ಮಿಂದಾಗಬೇಕು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಳ್ಳಿ ಗೋವಿಂದರಾಜು ಮಾತನಾಡಿ, ಮೀಟರ್ ಬಡ್ಡಿ ದಂಧೆಯಿಂದ ನಿಮ್ಮನ್ನು ಪಾರು ಮಾಡಲು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನೆರವು ನೀಡಿದೆ. ಇದನ್ನು ಎಂದಿಗೂ ಮರೆಯಬಾರದು, ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಡಿ ಎಂದು ಮನವಿ ಮಾಡಿದರು.

ಚಿಕ್ಕಅಂಕಂಡಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ಹೊಸೂರು ಕೃಷ್ಣಪ್ಪ, ಹುಲಿಬೆಲೆ ಎಸ್‌ಎಫ್‌ಸಿಎಸ್ ಅಧ್ಯಕ್ಷೆ ವೀಣಾವೆಂಕಟೇಶ್, ಕಾರ್ಯದರ್ಶಿ ರಾಮಣ್ಣ ಹಾಗೂ ಸೊಸೈಟಿ ನಿರ್ದೇಶಕರು ಹಾಜರಿದ್ದರು.