ಜಿಲ್ಲೆ

ಸೊಸೈಟಿಗಳ ಆನ್‌ಲೈನ್ ಗಣಕೀಕರಣದಿಂದ ಪಾರದರ್ಶಕತೆ

Kolar

ಕೋಲಾರ: ಸೊಸೈಟಿಗಳ ಗಣಕೀಕರಣ ಹಾಗೂ ಆನ್‌ಲೈನ್ ವಹಿವಾಟಿನಿಂದಾಗಿ ಸಹಕಾರಿ ಸಂಸ್ಥೆ ಮೇಲೆ ಗ್ರಾಹಕರಲ್ಲಿನ ಅಪನಂಬಿಕೆ ದೂರವಾಗಿ ವಿಶ್ವಾಸ ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ಸಂಬಂಧಿಸಿದಂತೆ ಪ್ಯಾಕ್ಸ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಆರ್ಥಿಕ ವರ್ಷದ ಆರಂಭದ ಏ.1ರಿಂದ 65 ಸೊಸೈಟಿಗಳು ಆನ್‌ಲೈನ್ ವ್ಯಾಪ್ತಿಗೆ ಒಳಪಡಲಿವೆ. ಸೆಪ್ಟೆಂಬರ್ ಅಂತ್ಯಕ್ಕೆ ಎರಡೂ ಜಿಲ್ಲೆಯ ಎಲ್ಲ ಸೊಸೈಟಿಗಳನ್ನು ಗಣಕೀಕರಣ ಮಾಡಲಾಗುವುದು ಎಂದರು.

ಸಹಕಾರಿ ಕ್ಷೇತ್ರ ಅಪನಂಬಿಕೆಯ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಪ್ರಾಮಾಣಿಕತೆ, ಪಾರದರ್ಶಕ ಆಡಳಿತದಿಂದ ಸಮಾಜದ ಸಂಶಯ ನಿವಾರಿಸಲು ಆನ್‌ಲೈನ್ ವ್ಯವಸ್ಥೆಯಿಂದ ಸಾಧ್ಯ. ಪ್ರತಿಕ್ಷಣದ ವಹಿವಾಟು ಪಾರದರ್ಶಕವಾಗಿರುವುದರಿಂದ ಗ್ರಾಹಕರಿಗೆ ನಂಬಿಕೆ ಹೆಚ್ಚಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೊಸೈಟಿಗಳಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಆನ್‌ಲೈನ್ ವ್ಯವಸ್ಥೆ ಜವಾಬ್ದಾರಿಯನ್ನು ಹೆಣ್ಣು ಮಕ್ಕಳಿಗೆ ವಹಿಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಒದಗಿಸಬೇಕು ಎಂದು ಸಲಹೆ ನೀಡಿದರು.

ಗ್ರಾಹಕರ ನಂಬಿಕೆ ಗಟ್ಟಿಗೊಳಿಸಲು ಸಾಧ್ಯವಾಗದ ಪಕ್ಷದಲ್ಲಿ ಜಾಗ ಖಾಲಿ ಮಾಡಿ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕು. ಸಹಕಾರಿ ರಂಗದಲ್ಲಿ ರಾಜಕೀಯ ಮಾಡುವುದು ಮನುಷ್ಯತ್ವ ಅಲ್ಲ ಎಂದು ಸಿಇಒಗಳಿಗೆ ಎಚ್ಚರಿಸಿದರು.

ರಜೆ ದಿನಗಳಂದು ಬಾಕಿ ಉಳಿದಿರುವ ಕಚೇರಿ ಕೆಲಸ ಪೂರ್ಣಗೊಳಿಸುವ ಮೂಲಕ ಹೊಸ ಜವಾಬ್ದಾರಿಗಳಿಗೆ ಸಿದ್ಧರಾಗಬೇಕು. ಶಿವನ ಆರಾಧನೆ ಜತೆಗೆ ಕೆಲಸದ ಆರಾಧನೆಯೂ ಜತೆ ಜತೆಯಾಗಿ ನಡೆಯಬೇಕು. ವ್ಯವಸ್ಥೆ ಉಳಿಸಲು ಎಲ್ಲರೂ ಬದ್ಧರಾಗಬೇಕಿದ್ದು, ಸಹಕಾರಿ ರಂಗದಲ್ಲಿ ನಾನು ಎಂದರೆ ಉಳಿಗಾಲವಿಲ್ಲ ಎಂದರು.

ಮೈಕ್ರೋ ಎಟಿಎಂ: ಏ.1ರಿಂದ ಸೊಸೈಟಿಗಳಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಚಾಲನೆಗೆ ಬರುತ್ತಿದ್ದು, ಎಸ್‌ಎಂಎಸ್ ಅಲರ್ಟ್ ಸೇವೆ ಲಭ್ಯವಾಗಲಿದೆ. ಸೊಸೈಟಿ ಆನ್‌ಲೈನ್ ವ್ಯವಸ್ಥೆಯನ್ನು ರಾಜ್ಯಮಟ್ಟದಲ್ಲಿ ಮಾದರಿಯಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಹಾಗಾಗಿ ಸಿಬ್ಬಂದಿ ಹೆಚ್ಚು ಮುತುವರ್ಜಿಯಿಂದ ತರಬೇತಿ ಪಡೆದುಕೊಳ್ಳಬೇಕು. ಆನ್‌ಲೈನ್ ವ್ಯವಸ್ಥೆಯಲ್ಲಿ ಆಡಿಟ್ ದಾಖಲೆಗಳು ಒಂದೇ ಕ್ಷಣದಲ್ಲಿ ಲಭ್ಯವಾಗುವುದರಿಂದ ಸೊಸೈಟಿ ಕಾರ್ಯದರ್ಶಿಗಳ ಕೆಲಸ ಸುಲಭವಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾರಾಯಣರೆಡ್ಡಿ, ಎಂ.ಎಲ್.ಅನಿಲ್ ಕುಮಾರ್, ಎಜಿಎಂ ಶಿವಕುಮಾರ್, ಕ್ಯಾಲನೂರು ಸೊಸೈಟಿ ಅಧ್ಯಕ್ಷ ರಾಮಾಂಜಿನಪ್ಪ, ಸುಗಟೂರು ಸೊಸೈಟಿ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಮದ್ದೇರಿ ಶ್ರೀನಿವಾಸಗೌಡ, ಉತ್ತನೂರು ಮಂಜುನಾಥ, ದೊಡ್ಡಶಿವಾರದ ಗೋವರ್ಧನರೆಡ್ಡಿ, ವಿ.ಸಾಫ್ಟ್ ರಾಜ್ಯ ವ್ಯವಸ್ಥಾಪಕ(ಮಾರುಕಟ್ಟೆ) ಸಿರೀಶ್ ಹಂಪಿಹೊಳಿ, ತಂತ್ರಜ್ಞರಾದ ಗಜಾನನ ಜೋಷಿ, ಪ್ರಸಾದ್ ಇದ್ದರು.

ಸೊಸೈಟಿ ಆನ್‌ಲೈನ್ ವ್ಯವಸ್ಥೆಯಿಂದಾಗಿ ಡಿಸಿಸಿ ಬ್ಯಾಂಕ್ ಸೇವೆ ಹಳ್ಳಿ ಮಟ್ಟದಲ್ಲಿ ಲಭ್ಯವಾಗಲಿದೆ. ಹಳ್ಳಿಯಿಂದ ರಾಜ್ಯ ಮಟ್ಟದವರೆಗೆ ಬ್ಯಾಂಕಿಂಗ್ ಅಧಿಕಾರಿಗಳು ಕ್ಷಣದಲ್ಲಿ ನಿಖರವಾದ ಮಾಹಿತಿ ಪಡೆದುಕೊಳ್ಳಬಹುದು. ಆನ್‌ಲೈನ್ ತರಬೇತಿಯನ್ನು ಸಿಬ್ಬಂದಿ ಶ್ರದ್ದೆ ಮತ್ತು ಆಸಕ್ತಿಯಿಂದ ಕಲಿತು ಗೊಂದಲಗಳಿಗೆ ಆಸ್ಪದ ನೀಡದೆ ಕೆಲಸ ಮಾಡಬೇಕು. ಎಂ.ರವಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ