ಜಿಲ್ಲೆ

ಮಹಿಳಾ ಸಂಘಗಳಿಗೆ 1 ಲಕ್ಷ ರೂಪಾಯಿ ಸಾಲ ಕೊಡಿಸಲು ಹೋರಾಟ

Kolar

ಕೋಲಾರ: ಸರ್ಕಾರ ಯಾವುದೇ ಇರಲಿ ವಿಧಾನಸೌಧದಲ್ಲಿ ಹೋರಾಡಿಯಾದರೂ ಮಹಿಳಾ ಸಂಘಗಳಿಗೆ 50 ಸಾವಿರ ರೂ. ಬದಲಿಗೆ 1 ಲಕ್ಷ ರೂ.ಸಾಲ ಸಿಗುವಂತೆ ಮಾಡುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಶಪಥ ಮಾಡಿದರು.

ತಾಲೂಕಿನ ಸುಗಟೂರು ಗ್ರಾಮದಲ್ಲಿ ಎಸ್‌ಎಫ್‌ಸಿಎಸ್ ಆಶ್ರಯದಲ್ಲಿ ಡಿಸಿಸಿ ಬ್ಯಾಂಕ್ ಭಾನುವಾರ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ಬಡ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬುದು ನನ್ನ ಮತ್ತು ಡಿಸಿಸಿ ಬ್ಯಾಂಕ್ ಆಶಯ. ಗೋವಿಂದಗೌಡ ಅವರು ಸಾಲದ ಜತೆಗೆ ಠೇವಣಿ ಸಂಗ್ರಹಣೆಯೂ ಮುಖ್ಯವೆಂದು ಅನೇಕ ಸಂದರ್ಭಗಳಲ್ಲಿ ಹೇಳುತ್ತಿದ್ದಾರೆ. ನಿಮ್ಮ ಹಿತ ಕಾಪಾಡುತ್ತಿರುವ ಡಿಸಿಸಿ ಬ್ಯಾಂಕಿನಲ್ಲೇ ಪ್ರತಿಯೊಬ್ಬರು ಠೇವಣಿ ಇಟ್ಟರೆ ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.

50 ಸಾವಿರ ರೂ. ಸಾಲ ಸಾಲದು, ಇದನ್ನು 1 ಲಕ್ಷಕ್ಕೆ ಏರಿಕೆ ಮಾಡಲು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ, ಕಾರಣಾಂತರಗಳಿಂದ ನನ್ನ ಆಸೆ ಈಡೇರಲಿಲ್ಲ, ನನಗೆ ಸರ್ಕಾರ ಯಾವುದು ಎಂಬುದು ಮುಖ್ಯವಲ್ಲ, ನಿಮ್ಮ ಪರವಾಗಿ ಹೋರಾಡುತ್ತೇನೆ. ನನಗೆ ಶಕ್ತಿ ನೀಡಬೇಕೆಂದು ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟರೆ ಮೋಸ ಹೋಗಬೇಕಾಗುತ್ತದೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ, ಇದಕ್ಕೆ ಕಿವಿಗೊಡಬೇಡಿ, ನನ್ನ ಮತ್ತು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಮೇಲೆ ನಂಬಿಕೆ ಇಟ್ಟು ಠೇವಣಿ ಇಡಿ ಎಂದು ಕರೆ ನೀಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಮಾತನಾಡಿ, 232 ಮಹಿಳಾ ಸಂಘಗಳಿಗೆ 11.37 ಕೋಟಿ ರೂ ಸಾಲ ನೀಡಲಾಗಿದೆ. ಬ್ಯಾಂಕಿಗೆ ತಾಯಂದಿರೇ ಆಧಾರಸ್ತಂಭ, ಠೇವಣಿ ಇಡದೆ ಸಾಲ ಕೇಳುವ ದೊಡ್ಡವರ ಬಗ್ಗೆ ಮಾತನಾಡುವುದು ವ್ಯರ್ಥ, ಮಹಿಳೆಯರು ಬ್ಯಾಂಕ್ ಉಳಿಸಬೇಕು ಎಂದರು.

ಕೇಂದ್ರದಿಂದ ಇನ್ನೂ 40 ಕೋಟಿ ರೂ. ಬಡ್ಡಿ ಹಣ ಬಾಕಿ ಬರಬೇಕಾಗಿದ್ದು, ಪ್ರತಿ ಕುಟುಂಬಕ್ಕೂ ಡಿಸಿಸಿ ಬ್ಯಾಂಕ್ ನೆರವಾಗಬೇಕು ಎಂಬುದು ತಮ್ಮ ಆಶಯವಾಗಿದೆ. ಇದೀಗ ವಿಮೆ ತಂದಿದ್ದು, ಸಾಲ ವಾಪಸು ಮಾಡದೇ ಮಹಿಳೆಯರು ಮೃತಪಟ್ಟರೆ ಅವರ ಸಾಲವನ್ನು ವಿಮೆ ಹಣದಿಂದ ಮನ್ನಾ ಮಾಡಲು ಕ್ರಮವಹಿಸಲಾಗಿದೆ ಎಂದರು.

ಬ್ಯಾಂಕ್ ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಎಂ.ಎಲ್.ಅನಿಲ್ ಕುಮಾರ್. ನಾಗನಾಳ ಸೋಮಣ್ಣ, ಯಲವಾರ ಸೊಣ್ಣೇಗೌಡ, ಸುಗಟೂರು ಎಸ್‌ಎಫ್‌ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಜಿಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಭಾಸ್ಕರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಶಶಿಧರ್, ಕೃಷ್ಣೇಗೌಡ, ತಾಪಂ ಸದಸ್ಯ ಪದ್ಮಾವತಮ್ಮ,ಆಂಜನಮ್ಮ,ಗ್ರಾಪಂ ಅಧ್ಯಕ್ಷ ಆನಂದ್ ಮತ್ತಿತರರು ಉಪಸ್ಥಿತರಿದ್ದರು.