ಜಿಲ್ಲೆ

ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಜಂಟಿಯಾಗಿ ಹಾಲು ಉತ್ಪಾದಕರ ಸಬಲೀಕರಣಕ್ಕೆ ಸಹಕಾರ

Kolar

ಕೋಲಾರ: ಹಾಲಿನ ಉತ್ಪಾದನೆ ಕುಸಿತದಿಂದ ಜಿಲ್ಲೆಯ ಜೀವಾಳವಾದ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಜಂಟಿಯಾಗಿ ಹಾಲು ಉತ್ಪಾದಕರ ಸಬಲೀಕರಣಕ್ಕೆ ಕೈಜೋಡಿಸಿವೆ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಹೇಳಿದರು.

ನಗರದ ಡಿಸಿಸಿ ಬ್ಯಾಂಕಿನ ಆವರಣದಲ್ಲಿ ಕಾಯಕ ಯೋಜನೆಯಡಿ ಚಿನ್ನಾಪುರ ಗ್ರಾಮದ ಮಹಿಳಾ ಸಂಘಗಳಿಗೆ ಗುರುವಾರ ಹೈನೋದ್ಯಮದ ಅಭಿವೃದ್ಧಿಗೆ ತಲಾ 10 ಲಕ್ಷ ರೂ. ಸಾಲದ ಚೆಕ್ ವಿತರಿಸಿ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿಕೊಂಡು ರೈತರು ಜೀವನ ನಡೆಸುತ್ತಿದ್ದಾರೆ. ಪ್ರತಿ ದಿನ 11.50 ಲಕ್ಷ ಹಾಲು ಸಂಗ್ರಹಣೆಯಾಗುತ್ತಿತ್ತು. ಈಗ ಕಡಿಮೆಯಾಗುತ್ತಿದೆ. ಹೆಣ್ಣು ಸಂಸಾರದ ಕಣ್ಣು ಎಂಬ ಪರಿಕಲ್ಪನೆ ಅನ್ವಯ ಹಸು ಖರೀದಿಗೆ ಬ್ಯಾಂಕ್ ಯಾವುದೇ ಭದ್ರತೆ ಇಲ್ಲದೆ 30,000 ರೂ.ಗಳಿಂದ 1 ಲಕ್ಷ ರೂ. ವರೆಗೆ ಡಿಸಿಸಿ ಬ್ಯಾಂಕ್ ಸಾಲ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಒಕ್ಕೂಟದ ಆಡಳಿತ ಮಂಡಳಿ ಸಹಕಾರ ನೀಡುತ್ತಿದೆ ಎಂದರು.

ಒಕ್ಕೂಟದಿಂದ ಬೇರೆ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿ ತೆಗೆದು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಲು ತೀರ್ಮಾನ ಮಾಡಲಾಗಿದೆ. ಕೋಚಿಮುಲ್ ಹಾಗೂ ಡಿಸಿಸಿ ಬ್ಯಾಂಕ್ ಎರಡೂ ರೈತರ, ತಾಯಂದಿರ ಹಿತ ಕಾಯುವುದು ಸಹಕಾರಿ ಸಂಸ್ಥೆಗಳಾಗಿರುವುದರಿಂದ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ನಿಮ್ಮನ್ನು ನಂಬಿ ಸಾಲ ನೀಡುತ್ತಿದೆ, ಸಕಾಲದಲ್ಲಿ ಪಾವತಿಸಿದರೆ ಬಡ್ಡಿಯಿಂದ ವಿನಾಯತಿ ಸಿಗುತ್ತದೆ. ಮರುಪಾವತಿಯಲ್ಲಿ ವಿಳಂಬ ಧೋರಣೆ ತೋರಿದರೆ ಬಡ್ಡಿ ಕಟ್ಟುವ ಸಂಕಷ್ಟಕ್ಕೆ ಸಿಲುಕಬೇಕಾದೀತು, ಸುಸ್ತಿಯಾದವರಿಗೆ ಮತ್ತೆ ಎಂದಿಗೂ ಬ್ಯಾಂಕ್‌ನಿಂದ ಸಾಲ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್, ಠೇವಣಿ ಇಡಲು ವಾಣಿಜ್ಯ ಬ್ಯಾಂಕ್ ಎಂಬ ಮನೋಭಾವ ಬಿಡಬೇಕು. ನಿಮ್ಮ ಬದುಕಿಗೆ ನೆರವಾಗಲು ಡಿಸಿಸಿ ಬ್ಯಾಂಕ್ ನಿಮ್ಮನ್ನು ನಂಬಿ ಭದ್ರತೆ ಇಲ್ಲದೇ ಸಾಲ ನೀಡುತ್ತಿರುವಾಗ ನಿಮ್ಮ ಉಳಿತಾಯದ ಹಣ ಇಡಲು ಬೇರೆ ಬ್ಯಾಂಕ್‌ಗಳಿಗೆ ಹೋಗುವುದು ಎಷ್ಟು ಸರಿ?. ಎಲ್ಲರೂ ಡಿಸಿಸಿ ಬ್ಯಾಂಕ್‌ನಲ್ಲೇ ಠೇವಣಿ ಇಡುವಂತೆ ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್, ನಾರಾಯಣರೆಡ್ಡಿ, ಮುಖಂಡ ಹೆಬ್ಬಟ ನಾರಾಯಣಗೌಡ, ತಾಪಂ ಸದಸ್ಯ ಗೋಪಾಲಗೌಡ, ಅರುಣಮ್ಮ, ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್, ಸೂಪರ್‌ವೈಸರ್ ಅಮೀನಾ ಉಪಸ್ಥಿತರಿದ್ದರು.