ಜಿಲ್ಲೆ

ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಯಿರಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

Tumakuru

ತುಮಕೂರು : ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ನಡೆಯದಂತೆ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸರ್ಕಾರಿ ಇಲಾಖೆಗಳ ಜತೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದರು.

ನಗರದ ಬಾಲಭವನದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರೊನಾ ಸಂದರ್ಭದಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ವರದಿಯಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ನಡೆಯದಂತೆ ಎಚ್ಚರ ವಹಿಸಬೇಕು ಎಂದರು.

ಅನಕ್ಷರತೆ, ಬಡತನಗಳಂತಹ ಮೂಲ ಕಾರಣಗಳಿಂದ ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗಿಗೆ ಇಂದಿಗೂ 18 ವರ್ಷದೊಳಗಿನ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಶಿಕ್ಷಣದ ಪ್ರಮಾಣ ಕಡಿಮೆ ಇರುವ, ಆರ್ಥಿಕವಾಗಿ ಹಿಂದುಳಿದಿರುವ ಗೊಲ್ಲರಹಟ್ಟಿಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ಕಂಡುಬರುವುದರಿಂದ ಅಂತಹ ಪ್ರದೇಶಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆಯಿತ್ತರು.

ಬಾಲ್ಯವಿವಾಹದ ಸನ್ನಿವೇಷಗಳು ಕಂಡುಬಂದರೆ ಕೂಡಲೇ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಬೇಕು ಅಥವಾ ಪೊಲೀಸರಿಗೆ ದೂರು ನೀಡಬೇಕು. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕರೊನಾ ಸಂದರ್ಭದಲ್ಲಿ ಬಾಲ್ಯವಿವಾಹಗಳು ನಡೆದಿದ್ದು, ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದಿರುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಬಾಲ್ಯವಿವಾಹಕ್ಕೆ ಒಳಪಟ್ಟು ಮಾನಸಿಕವಾಗಿ ಮತ್ತು ದೈಹಕವಾಗಿ ನೊಂದಿರುವ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡೋಣ ಮತ್ತು ಬಾಲ್ಯವಿವಾಹ ತಡೆಗಟ್ಟೋಣ ಎಂದು ಜಿಲ್ಲಾಧಿಕಾರಿ ಪ್ರತಿಜ್ಞಾವಿಧಿ ಬೋಧಿಸಿದರು.

18 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳ ಬಾಲ್ಯವಿವಾಹ ತಡೆಗಟ್ಟಲು ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ, ಡಾ.ಕೇಶವರಾಜ್, ಬಿಸಿಎಂ ಅಧಿಕಾರಿ ತ್ಯಾಗರಾಜು ಮತ್ತಿತರರು ಇದ್ದರು.

ಬಾಲ್ಯ ವಿವಾಹದಲ್ಲಿ ರಾಜ್ಯಕ್ಕೆ 8ನೇ ಸ್ಥಾನ : ಬಾಲ್ಯವಿವಾಹ ಹೆಚ್ಚಾಗಿ ನಡೆಯತ್ತಿರುವ ದೇಶಗಳಲ್ಲಿ ಭಾರತ ದೇಶವು ಎರಡನೇ ಸ್ಥಾನದಲ್ಲಿದ್ದು, ಅದರಲ್ಲಿ ರಾಜ್ಯ 8ನೇ ಸ್ಥಾನದಲ್ಲಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು. ಬಾಲ್ಯವಿವಾಹ ತಡೆಯುವ ಹಕ್ಕು ಕೇವಲ ಇಲಾಖೆಗಳಿಗಲ್ಲದೇ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಸಾಮಾನ್ಯ ಜನರ ಜೊತೆ ಒಡನಾಟ ಇಟ್ಟುಕೊಳ್ಳುವ ಮೂಲಕ ಬಾಲ್ಯವಿವಾಹ ಪ್ರಕರಣಗಳ ಬಗ್ಗೆ ಮಾಹಿತಿ ದೊರೆತ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದರು.

ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಅರಿವಿಲ್ಲದ ವಯಸ್ಸಿನಲ್ಲಿ ವಿವಾಹವಾದ ಹೆಣ್ಣುಮಕ್ಕಳ ಮನಸ್ಸು ವಯಸ್ಸಿಗೆ ಬಂದಾಗ ವಿಚಲಿತವಾಗುವುದರಿಂದ ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಡಾ.ಕೆ.ವಿದ್ಯಾಕುಮಾರಿ ಜಿಪಂ ಸಿಇಒ