ದೇವನಹಳ್ಳಿ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಉದ್ಘಾಟಿಸಿದರು.ಜಿಪಂ ಸಿಇಒ ಅನುರಾಧಾ, ಜಿಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ. ಮುದ್ದಣ್ಣ ಇದ್ದರು. 
ಜಿಲ್ಲೆ

ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ

ಶಿವರಾಜ.ಎಂ

ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಎಚ್ಚರಿಕೆ

ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಯಾಗಾರ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಭ್ರೂಣ ಹತ್ಯೆ ಕಾನೂನು ಬಾಹಿರ ಶಿಕ್ಷಾರ್ಹ ಅಪರಾಧವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಭ್ರೂಣ ಹತ್ಯೆ ತಡೆಯಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚಿಸಿದರು.
ದೇವನಹಳ್ಳಿ ತಾಲೂಕು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಹಾಗೂ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯಲ್ಲಿ ಮಾತನಾಡಿದರು. ಮಾನವ ಕಳ್ಳ ಸಾಗಣೆ ತಡೆ, ಭ್ರೂಣ ಹತ್ಯೆ ತಡೆ, ಬಾಲ್ಯ ವಿವಾಹ ತಡೆ, ಹೆಣ್ಣು ಮಕ್ಕಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದ್ದು, ಇಂತಹ ಪ್ರಕರಣಗಳು ನಡೆಯದಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿರಬೇಕು ಎಂದರು. ಸಾರ್ವಜನಿಕರು ಕೂಡ ಯಾವುದೇ ಮೂಡನಂಬಿಕೆ ಅಥವಾ ಆಸೆ ಆಮಿಷಗಳಿಗೆ ಒಳಗಾಗದೆ ಮಕ್ಕಳ ರಕ್ಷಣೆ, ಭ್ರೂಣ ಹತ್ಯೆಗಳನ್ನು ತಡೆಯಬೇಕು. ಭ್ರೂಣ ಹತ್ಯೆ, ಬಾಲ್ಯ ವಿವಾಹ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ನಡೆಸಿದಲ್ಲಿ ಅಂತವರ ವಿರುದ್ಧ ಹಾಗೂ ಅದಕ್ಕೆ ಸಹಕಾರ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು. ಮಾನವ ಕಳ್ಳಸಾಗಣೆ, ಭ್ರೂಣ ಹತ್ಯೆ ಇವುಗಳಿಂದ ಜಿಲ್ಲೆಯನ್ನು ಮುಕ್ತ ಗೊಳಿಸಬೇಕು. ಇದಕ್ಕಾಗಿ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಾವಿರಕ್ಕೆ 946 ಮಹಿಳೆಯರು: ಪ್ರಸಕ್ತ ವರ್ಷದ ಕರ್ನಾಟಕದಲ್ಲಿ 1000 ಪುರುಷರಿಗೆ 973 ಸ್ತ್ರೀಯರು ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1000 ಪುರುಷರಿಗೆ 946 ಸ್ತ್ರೀಯರ ಸಂಖ್ಯಾ ಅನುಪಾತವಿದೆೆ. ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಗರ್ಭಾವಸ್ಥೆಯ ಮಹಿಳೆಯರು ತಮ್ಮ ಮಗುವಿನ ಬೆಳವಣಿಗೆ ಬಗ್ಗೆ ಮಾತ್ರ ತಿಳಿದುಕೊಳ್ಳಬೇಕು ಎಂದು ನೆಲಮಂಗಲ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಸೋನಿಯಾ ಹೇಳಿದರು.
ಭ್ರೂಣಹತ್ಯೆಗೆ ಜೈಲು: ಭ್ರೂಣಲಿಂಗ ಹತ್ಯೆ ತಡೆಗಟ್ಟಲು 1988 ರಲ್ಲಿ ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಈ ಭ್ರೂಣಲಿಂಗ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮೊದಲ ಪ್ರಕರಣದ ವೈದ್ಯರಿಗೆ 10 ಸಾವಿರ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ಇದೆ ಎಂದು ವಕೀಲ ಮಹೇಶ್‌ದಾಸ್ ಹೇಳಿದರು. ಹೆಣ್ಣು-ಗಂಡು ಮಗು ಎನ್ನುವ ತಾರತಮ್ಯ ಬಿಟ್ಟು, ಪ್ರತಿಯೊಬ್ಬರೂ ಹೆಣ್ಣು ಭ್ರೂಣ ಹತ್ಯೆ ತಡೆಯುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ವಿಶೇಷ ಉಪನ್ಯಾಸ: ಸಿನಿಯರ್ ಸ್ಪೆಷಲೀಸ್ಟ್ ರೋವಿನ ಬಾಸ್ಟೀನ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಚಟುವಟಿಕೆಗಳು ವಿಪರೀತವಾಗಿ ನಡೆಯುತ್ತಿವೆ. ಜನರ ಬಡತನ, ಆರ್ಥಿಕ ಪರಿಸ್ಥಿತಿಯನ್ನು ಗುರಿಯಾಗಿಸಿಕೊಂಡು ಹುಡುಗಿಯರು ಹಾಗೂ ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುವುದು ಕಂಡು ಬರುತ್ತಿದೆ. ಸಮಾಜದಲ್ಲಿನ ಬಡತನ ನಿರ್ಮೂಲನೆ, ಹೆಣ್ಣು ಶೋಷಣೆ, ಲಿಂಗ ಅಸಮಾನತೆಯನ್ನು ನಿರ್ಮೂಲನೆ ಮತ್ತು ಸಾರ್ವಜನಿಕರು ಜಾಗೃತಿ ವಹಿಸುವುದಿಂದ ಮಾನವ ಕಳ್ಳ ಸಾಗಾಣಿಕೆ ತಡೆಯಬಹುದೆಂದು ವಿಶೇಷ ಉಪನ್ಯಾಸ ನೀಡಿದರು.